ಧರ್ಮಶಾಲಾ: ಪ್ರವಾಸಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ನಾಳೆ ಎರಡನೇ ಟಿ-20 ಪಂದ್ಯದಲ್ಲಿ ಭಾಗಿಯಾಗಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ ಟೀಂ ಇಂಡಿಯಾ ಹೊಸದೊಂದು ದಾಖಲೆ ಬರೆಯುವ ತವಕದಲ್ಲಿದೆ.
ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 1-0 ಅಂತರದ ಮುನ್ನಡೆಯಲಿದ್ದು, ನಾಳೆ ಧರ್ಮಶಾಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವಿನ ನಗೆ ಬೀರುವ ತವಕದಲ್ಲಿದೆ. ಈ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಈಗಾಗಲೇ ವಿಶೇಷ ಸಾಧನೆ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಸಾಲಿಗೆ ಸೇರಲಿದೆ.
ಟಿ-20 ಕ್ರಿಕೆಟ್ನಲ್ಲಿ ಪಾಕ್ ತಂಡ ಇಲ್ಲಿಯವರೆಗೆ 189 ಪಂದ್ಯಗಳಿಂದ 117 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, 100ಕ್ಕೂ ಅಧಿಕ ಪಂದ್ಯಗಳಲ್ಲಿ ಜಯ ಸಾಧಿಸಿರುವ ಮೊದಲ ತಂಡವಾಗಿದೆ. ಇನ್ನು ಭಾರತ 157 ಪಂದ್ಯಗಳಿಂದ 99 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, ನಾಳೆಯ ಪಂದ್ಯದಲ್ಲಿ ಗೆದ್ದು, 100 ಟಿ-20 ಪಂದ್ಯ ಗೆದ್ದ ಸಾಲಿಗೆ ಸೇರಿಕೊಳ್ಳಲಿದೆ.