ನವದೆಹಲಿ: ಎಂಟನೇ ಏಷ್ಯಾಕಪ್ ಗೆಲ್ಲಲು ಮತ್ತು 10 ವರ್ಷಗಳ ಐಸಿಸಿ ಕಪ್ ಬರವನ್ನು ನೀಗಿಸಲು ಭಾರತ ತಂಡ ಶತಾಯ ಗತಾಯ ಪ್ರಯತ್ನದಲ್ಲಿದೆ. ಇದಕ್ಕಾಗಿ ಬಿಸಿಸಿಐ ತನ್ನ ಸರ್ವಶಕ್ತಿಯನ್ನು ಬಳಸಿ ಯಶಸ್ಸಿನ ಹುಡುಕಾಟ ಮಾಡುತ್ತಿದೆ ಎಂದರೆ ತಪ್ಪಾಗದು. ಏಕೆಂದರೆ ವಿಶ್ವಕಪ್ಗೂ ಮುನ್ನ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿ ನಡೆಯುತ್ತಿರುವ ಅಭ್ಯಾಸದಲ್ಲಿ 15 ಹೆಚ್ಚು ನೆಟ್ ಬೌಲರ್ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಇದೆ.
ಏಷ್ಯಾಕಪ್ನಲ್ಲಿ ಭಾರತಕ್ಕೆ ಪಾಕಿಸ್ತಾನ ತಂಡ ಪ್ರಬಲ ಎದುರಾಳಿ ಎಂದು ಬಿಂಬಿತವಾಗುತ್ತಿದೆ. ಅಲ್ಲದೇ ಪಾಕಿಸ್ತಾನ ವೇಗದ ಬೌಲಿಂಗ್ನಲ್ಲಿ ಬಲಿಷ್ಠವಾಗಿದೆ. ಬಾಬರ್ ಅಜಮ್ ನಾಯಕತ್ವದ ಅಡಿಯಲ್ಲಿ ಪಾಕ್ ತಂಡ 10 ಏಕದಿನ ಪಂದ್ಯಗಳನ್ನು ಈ ವರ್ಷ ಆಡಿದ್ದು ಅದರಲ್ಲಿ ಕೇವಲ 3 ರಲ್ಲಿ ಸೋಲು ಕಂಡಿದೆ. ಏಷ್ಯಾಕಪ್ನಲ್ಲಿ ಪಾಕಿಸ್ತಾನದ ಎಡಗೈ ಬೌಲರ್ ಶಾಹೀನ್ ಆಫ್ರಿದಿ ಕಾಡಿದರೆ, ವಿಶ್ವಕಪ್ನಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಭೀತಿ ಇದೆ. ಹೀಗಾಗಿ ಇವರು ಎದುರಿಸುವ ನಿಟ್ಟಿನಲ್ಲಿ ವಿಭಿನ್ನ ಬೌಲಿಂಗ್ ಅನುಭವಕ್ಕಾಗಿ 15ಕ್ಕೂ ಹೆಚ್ಚು ಬೌಲರ್ಗಳಿಂದ ಬಾಲ್ ಹಾಕಿಸಲಾಗುತ್ತಿದೆ.
ಅನಿಕೇತ್ ಚೌಧರಿ ಅವರು ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ಅಭ್ಯಾಸಕ್ಕಾಗಿ ಕರೆಸಲಾಗಿದೆ. ಕಳೆದ ರಣಜಿ ಆವೃತ್ತಿಯಲ್ಲಿ 33 ವರ್ಷದ ಅನಿಕೇತ್ 7 ಪಂದ್ಯದಿಂದ 33 ವಿಕೆಟ್ ಪಡೆದು ಮಿಂಚಿದ್ದಾರೆ. ಇವರು ಎಡಗೈ ವೇಗದ ಬೌಲರ್ ಆಗಿರುವುದರಿಂದ ಶಾಹೀನ್ ಆಫ್ರಿದಿ, ಟ್ರೆಂಟ್ ಬೌಲ್ಟ್ ಅವರನ್ನು ಮಹತ್ವದ ಟೂರ್ನಿಯಲ್ಲಿ ಎದುರಿಸಲು ಸಹಾಯವಾಗಲಿದೆ.