ಫುಜೋ(ಚೀನಾ): ಚೀನಾ ಓಪನ್ನಲ್ಲಿ ಭಾರತದ ಕೊನೆಯ ಪದಕ ಭರವಸೆ ಮೂಡಿಸಿದ್ದ ಸಾಯಿ ಪ್ರಣೀತ್ ಕೂಡ ಸೋಲುಕಾಣುವ ಮೂಲಕ ಸಿಂಗಲ್ಸ್ ವಿಭಾಗದಲ್ಲಿ ಭಾರತ ನೀರಸ ಪ್ರದರ್ಶನ ತೋರಿ ಹೊರಬಿದ್ದಿದೆ.
ಪ್ರಣೀತ್ ಡೆನ್ಮಾರ್ಕ್ನ ಆ್ಯಂಡರ್ಸ್ ಅ್ಯಂಟನ್ಸೆನ್ ವಿರುದ್ಧ 20-22, 22-20, 21-16ರಲ್ಲಿ ಸೋಲು ಕಂಡರು.
ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ವಿಶ್ವದ 25ನೇ ಶ್ರೇಯಾಂಕದ ಕಶ್ಯಪ್ ಕೂಡ 7ನೇ ಶ್ರೇಯಾಂಕದ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ 43 ನಿಮಿಷದ ಕಾದಾಟದಲ್ಲಿ 13-21, 19-21 ರಿಂದ ಸೋಲನುಭವಿಸಿದ್ದರು.
ಒಟ್ಟಾರೆ ಸಿಂಗಲ್ಸ್ನಲ್ಲಿ ಸ್ಪರ್ಧಿಸಿದ್ದ ಮಹಿಳಾ ವಿಭಾಗದಲ್ಲಿ ಪಿ. ವಿ. ಸಿಂಧು, ಸೈನಾ ಮತ್ತು ಪುರುಷರ ವಿಭಾಗದಲ್ಲಿ ಶ್ರೀಕಾಂತ್, ಹೆಚ್ ಎಸ್ ಪ್ರಣಯ್, ಕಶ್ಯಪ್ ಹಾಗೂ ಸಾಯಿ ಪ್ರಣೀತ್ ಕ್ವಾರ್ಟರ್ ಫೈನಲ್ಗೂ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
ಮಿಕ್ಸ್ ಡಬಲ್ಸ್ನಲ್ಲೂ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ 21-23, 16-21 ರಲ್ಲಿ ದಕ್ಷಿಣ ಕೊರಿಯಾದ ಸೆವುಂಗ್ ಜೆ ಸಿಯೊ ಮತ್ತು ಚೇ ಯುಜುಂಗ್ ವಿರುದ್ಧ ಸೋಲನುಭವಿಸಿದರು.
ಡಬಲ್ಸ್ ವಿಭಾಗದಲ್ಲಿ ಥಾಯ್ಲೆಂಡ್ ಓಪನ್ ಚಾಂಪಿಯನ್ ಸಾಥ್ವಿಕ್-ಚಿರಾಗ್ ಶೆಟ್ಟಿ ಜೋಡಿ ಜಪಾನ್ನ ಹಿರೊಯುಕಿ ಎಂಡೋ ಮತ್ತು ಯುಟಾ ವಟನಾಬೆ ವಿರುದ್ಧ ಸೆಣಸಾಡಲಿದ್ದಾರೆ. ಇದೊಂದೇ ವಿಭಾಗದಲ್ಲಿ ಭಾರತ ಟೂರ್ನಿಯಲ್ಲಿ ಉಳಿದುಕೊಂಡಿದೆ.