ಹೈದರಾಬಾದ್: ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಜಪಾನ್ ಆಟಗಾರ್ತಿ ಒಕುಹಾರರನ್ನು ಮಣಿಸಿ ಭಾರತದ ಪಿವಿ ಸಿಂಧು ವಿಶ್ವ ಚಾಂಪಿಯನ್ ಆಗಿದ್ದರು. ಈ ವೇಳೆ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಗೀತೆ ಕೇಳಿ ಭಾವುಕರಾಗಿದ್ದರು.
ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಮಹಿಳಾ ಸಿಂಗಲ್ಸ್ ವಿಭಾಗ ಫೈನಲ್ ಮುಖಾಮುಖಿಯಲ್ಲಿ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ 21-7, 21-7ರ ಅಂತರದಲ್ಲಿ ಗೆದ್ದು ಇತಿಹಾಸ ಬರೆದಿದ್ದರು. ಈ ಚಾಂಪಿಯನ್ ಕೂಟದಲ್ಲಿ ಸಿಂಧು ತಮ್ಮ 5 ನೇ ಪದಕಕ್ಕೆ ಕೊರಳೊಡ್ಡಿದ್ದರು. ಆದರೆ, ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದರು.
ಪಂದ್ಯದ ನಂತರ ಪ್ರಶಸ್ತಿ ಸ್ವೀಕರಿಸಿದ ಸಿಂಧು ನಂತರ ರಾಷ್ಟ್ರ ಗೀತೆ ವೇಳೆ ಪೋಡಿಯಂ ಮೇಲೆ ನಿಂತು ಭಾವುಕರಾಗಿದ್ದು ಕಂಡುಬಂದಿತು. ತವರಿಗೆ ಮರಳಿದ ನಂತರ ಈ ವಿಚಾರವನ್ನು ಕೇಳಿದ್ದಕ್ಕೆ ಉತ್ತರಿಸಿದ ಸಿಂಧು," ರಾಷ್ಟ್ರಗೀತೆ ಕೇಳುವುದಕ್ಕೆ ಯಾವಾಗಲೂ ಮನಸಲ್ಲಿ ಅದ್ಭುತ ಭಾವನೆ ಮೂಡುತ್ತದೆ. ಆದರೆ ನನಗೆ ಅರಿವಿಲ್ಲದಂತೆ ಬಾಸೆನ್ನಲ್ಲಿ ಕಣ್ಣಲ್ಲಿ ನೀರು ಬಂದಿತ್ತು. ಆ ಸಮಯದಲ್ಲಿ ನಾನು ವಿಶ್ವ ಶಿಖರ( ಟಾಪ್ ಆಫ್ ದಿ ವರ್ಲ್ಡ್) ಮೇಲೆಯೇ ನಿಂತಿದ್ದೇನೆ ಎನಿಸಿತು. ಭಾರತದ ಧ್ವಜ ಮೇಲೇರುತ್ತಿರುವುದನ್ನು ನೋಡುವುದೇ ಒಂದು ಅದ್ಭುತ ಎಂದು ಸಿಂಧು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಗೆಲುವು ನನಗೆ ವಿಶ್ವಾಸ ತಂದುಕೊಟ್ಟಿದೆ. ಇನ್ನು ಸಾಧನೆ ಮಾಡಬೇಕೆಂಬ ಹಂಬಲವಿದ್ದು, ಮುಂದಿನ ದಿನಗಳಲ್ಲಿ ಇದೇ ವಿಶ್ವಾಸದಿಂದ ಸೂಪರ್ ಸಿರೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತೇನೆ. ಒಲಿಂಪಿಕ್ ಹತ್ತಿರ ಬರುತ್ತಿದ್ದು ಅಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ ಆದಷ್ಟು ಬೇಗ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.