ತಮಿಳು ನಟ ವಿಜಯ್ ಸೇತುಪತಿ ಮಂಗಳಮುಖಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಮೇರು ನಟನ ಬಂಧನಕ್ಕೆ ತೃತೀಯ ಲಿಂಗಿಗಳು ಆಗ್ರಹಿಸಿದ್ದಾರೆ.
ವಿಜಯ್ ವಿರುದ್ಧ ಮಂಗಳಮುಖಿಯರ ಆಕ್ರೋಶಕ್ಕೆ ಕಾರಣವಾಗಿದ್ದು 'ಸೂಪರ್ ಡಿಲೆಕ್ಸ್' ಸಿನಿಮಾ. ಕಳೆದ ಮಾರ್ಚ್ 23 ರಂದು ಬಿಡುಗಡೆಯಾಗಿರುವ ಈ ತಮಿಳು ಚಿತ್ರ ಎಲ್ಲೆಡೆ ಒಳ್ಳೆಯ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಆದರೆ, ತೃತೀಯ ಲಿಂಗಿಗಳ ಮನಸ್ಸಿಗೆ ಮಾತ್ರ ಈ ಚಿತ್ರ ನೋವು ಮಾಡಿದೆ.
ಸೂಪರ್ ಡಿಲೆಕ್ಸ್ ಚಿತ್ರದಲ್ಲಿ ವಿಜಯ್ ಸೇತುಪತಿ ಮಂಗಳಮುಖಿ ಪಾತ್ರ ನಿಭಾಯಿಸಿದ್ದಾರೆ. ಈ ಪ್ರತಿಭಾವಂತ ನಟ ತೃತೀಯ ಲಿಂಗಿಯ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿಮುಗಿಸಿದ್ದಾರೆ. ಅವರ ಪಾತ್ರಾಭಿನಯಕ್ಕೆ ಸಿನಿರಸಿಕರು ಫುಲ್ ಫಿದಾ ಆಗಿದ್ದಾರೆ. ಆದರೆ, ಚಿತ್ರಕಥೆಯ ವಿರುದ್ಧ ಮಂಗಳಮುಖಿಯರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಿನಿಮಾದಲ್ಲಿ ಮಂಗಳಮುಖಿ ಪಾತ್ರಧಾರಿ ವಿಜಯ್, ಹಣ ವಸೂಲಿಗಾಗಿ ಎರಡು ಮಕ್ಕಳನ್ನು ಅಪಹರಿಸುತ್ತಾರೆ. ಇದು ನಮ್ಮ ಸಮುದಾಯಕ್ಕೆ ಮಾಡಿರುವ ಅಪಮಾನ. ನಾವು ಎಂದಾದರೂ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ನೀವು ಕೇಳಿದ್ದಿರಾ? ವಿಜಯ್ ಮೇಲೆ ನಮಗೆ ಅಪಾರ ಗೌರವ ಇದೆ. ಆದರೆ, ಈ ಚಿತ್ರದಲ್ಲಿ ನಟಿಸುವ ಮೂಲಕ ಅವರು ಅದನ್ನು ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹ ತೃತೀಯ ಲಿಂಗಿಗಳಿಂದ ಕೇಳಿ ಬಂದಿದೆ.