ಮಂಗಳೂರಿನಲ್ಲೇ ವಿದ್ಯಾಭ್ಯಾಸ ಮುಗಿಸಿದ ಮೋಕ್ಷಿತಾಗೆ ಫ್ಯಾಷನ್ನತ್ತ ಏನೋ ಒಂದು ರೀತಿಯ ಸೆಳೆತ. ಅಂತೆಯೇ ಫ್ಯಾಷನ್ ಡಿಸೈನ್ ಕೋರ್ಸ್ ಕಲಿಯುವ ನಿರ್ಧಾರವನ್ನು ಕೂಡ ಮಾಡಿದ್ದರು. ಇದರ ನಡುವೆ ಫೇಸ್ಬುಕ್ನಲ್ಲಿ ಮೋಕ್ಷಿತಾ ಅವರ ಫೋಟೋಗಳನ್ನು ನೋಡಿದ ಪಾರು ಧಾರಾವಾಹಿ ತಂಡ ಆಡಿಶನ್ನಲ್ಲಿ ಭಾಗವಹಿಸಲು ಆಫರ್ ನೀಡಿದೆ. ನಟನೆಯ ರೀತಿ ನೀತಿಗಳೇ ತಿಳಿಯದ ಕರಾವಳಿ ಕುವರಿ ಆಡಿಶನ್ನಲ್ಲೇನೋ ಭಾಗವಹಿಸಿದ್ದಾಯಿತು. ಆದರೆ ಅಲ್ಲೊಂದು ಅಚ್ಚರಿಯ ಸಂಗತಿ ನಡೆಯಿತು. ಮೋಕ್ಷಿತಾ ಸೆಲೆಕ್ಟ್ ಆಗಿದ್ದರು, ಅದು ಕೂಡಾ ಮುಖ್ಯ ಪಾತ್ರಧಾರಿಯಾಗಿ.
ಪಾರುವಾಗಿ ವೀಕ್ಷಕರನ್ನು ಮೋಡಿ ಮಾಡುತ್ತಿರುವ ಮಂಗಳೂರು ಚೆಲುವೆ ಮೋಕ್ಷಿತಾ - ಪಾರು ಧಾರಾವಾಹಿ ತಂಡ
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ 'ಪಾರು' ಧಾರಾವಾಹಿಯಲ್ಲಿ ಪಾರು ಆಗಿ ಮಿಂಚುತ್ತಿರುವ ಚೆಂದುಳ್ಳಿ ಚೆಲುವೆ ಕಡಲನಗರಿ ಮಂಗಳೂರಿನವರು. ಈ ದುಂಡುಮುಖದ ಸುಂದರಿ ಹೆಸರು ಮೋಕ್ಷಿತಾ.
ಆಡಿಷನ್ ಮುಗಿದ ಮೇಲೆ ಮೊದಲ ಬಾರಿಗೆ ಮೇಕಪ್ ಹಾಕಿ, ಕ್ಯಾಮರಾ ಎದುರಿಸಿದಾಗ ಮಂಗಳೂರು ಚೆಲುವೆ ಬಹಳ ಸುಸ್ತಾಗಿದ್ದರಂತೆ. ಆಗ ಕಣ್ಣೀರಿಡುತ್ತಾ ಈ ಆ್ಯಕ್ಟಿಂಗ್ ಎಲ್ಲಾ ನನಗೆ ಬೇಡ ಎಂದು ತೀರ್ಮಾನಿಸಿದ್ದರು. ಆದರೆ ಧಾರಾವಾಹಿ ತಂಡ ಮೋಕ್ಷಿತ ಅವರನ್ನು ಹುರಿದುಂಬಿಸಿ ಅವರನ್ನು ಧಾರಾವಾಹಿಯಲ್ಲಿ ಉಳಿಸಿಕೊಂಡರು. ನಟನೆ ಜೊತೆಗೆ ಮೋಕ್ಷಿತಾ ಅವರಿಗೆ ಮಾಡೆಲಿಂಗ್ನತ್ತ ವಿಶೇಷ ಒಲವು. ಫ್ಯಾಷನ್ ಪ್ರಿಯೆಯಾಗಿರುವ ಮೋಕ್ಷಿತಾ ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚಿದರು. ಮಾತ್ರವಲ್ಲ ಕೆಲವು ಜಾಹೀರಾತುಗಳಲ್ಲೂ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ.
ಇದೀಗ ಸದ್ಯಕ್ಕೆ ಪಾರು ಪಾತ್ರಕ್ಕೆ ಜೀವ ತುಂಬುವುದರಲ್ಲಿ ಬ್ಯುಸಿಯಾಗಿರುವ ಮೋಕ್ಷಿತಾ ಇಂದು ಪಾರು ಎಂದೇ ಚಿರಪರಿಚಿತ. ತಾವು ಬಣ್ಣ ಹಚ್ಚಿರುವ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನ ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಜನರು ತಮ್ಮನ್ನು ಇಷ್ಟೊಂದು ಇಷ್ಟಪಡುತ್ತಾರೆಂದು ಮೋಕ್ಷಿತಾ ಎಂದಿಗೂ ಭಾವಿಸಿರಲಿಲ್ಲ. ಇಂದು ಅವರು ಎಲ್ಲೇ ಹೋದರೂ ಜನ ಅವರನ್ನು ಪಾರು ಎಂದೇ ಕರೆದು ಮಾತನಾಡಿಸುತ್ತಾರಂತೆ. ಸಿನಿಮಾಗಳಿಂದ ಕೂಡಾ ಮೋಕ್ಷಿತಾಗೆ ಸಾಕಷ್ಟು ಅವಕಾಶಗಳು ಬರುತ್ತಿದೆಯಂತೆ. ಒಳ್ಳೆ ಅವಕಾಶಗಳು ಲಭಿಸಿದರೆ ಖಂಡಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಮೋಕ್ಷಿತಾ.