ಸಲಗ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿದ ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಅಕ್ಟೋಬರ್ 14ರಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗಿಂತ, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಅದ್ಭುತವಾಗಿ ಪ್ರದರ್ಶನ ಕಾಣುತ್ತಿರುವ ಸಲಗ ಸಿನಿಮಾ ಬಾಕ್ಸ್ ಆಫೀಸ್ ಲೂಟಿ ಮಾಡಿದೆ.
ಸಲಗ ಚಿತ್ರದ ಸಕ್ಸಸ್ ಸೀಕ್ರೆಟ್
ರೌಡಿಸಂ ಕಥೆ ಆಧರಿಸಿದ ಸಲಗ ಸಿನಿಮಾ ಮೇಜರ್ ಹೈಲೆಟ್ಸ್ ಅಂದ್ರೆ, ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತದ ಜತೆಗೆ ಹಿನ್ನೆಲೆ ಸಂಗೀತ. ಈ ಸಂಗೀತದ ಪೂರಕವಾಗಿ ಕ್ಯಾಮರಾಮ್ಯಾನ್ ಶಿವ ಸೇನಾ ಕ್ಯಾಮರಾ ವರ್ಕ್. ಜತೆಗೆ ಸಲಗ ಚಿತ್ರದಲ್ಲಿ ಬರುವ ವಿಚಿತ್ರ ಪಾತ್ರಗಳು. ಕೆಂಡ, ಜುಟ್ಟು ಸೀನಾ, ಸಾವಿತ್ರಿ, ಸೂರಿ ಅಣ್ಣ, ಸಾಮ್ರಾಟ್ ಪಾತ್ರಗಳನ್ನ ಮಾಸ್ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಸಿನಿಮಾ ಟೈಟಲ್ಗೆ ತಕ್ಕಂತೆ, ದುನಿಯಾ ವಿಜಯ್ ಸಲಗ ಎಂಬ ಹೆಸರಿನಲ್ಲಿ ಮಿಂಚಿರುವುದು. ಬೋಲ್ಡ್ ಪಾತ್ರದಲ್ಲಿ ಸಂಜನಾ ಆನಂದ್ ಗಮನ ಸೆಳೆಯುತ್ತಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಧನಂಜಯ್ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಿದ್ದಾರೆ.
ಒಂದು ವಾರಕ್ಕೆ 25. 5 ಕೋಟಿ ರೂ.ಕಲೆಕ್ಷನ್
ಕೊರೊನಾ ಸಮಯದಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಿಗೆ ಪ್ರೇಕ್ಷಕರು ಬಂದು ಸಿನಿಮಾ ನೋಡಿ ಮೆಚ್ಚಿಕೊಂಡಿರುವುದು ಇಡೀ ಸಲಗ ಚಿತ್ರತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಹೀಗಾಗಿ ಸಲಗ ಸಿನಿಮಾ ಒಂದು ದಿನಕ್ಕೆ ನಾಲ್ಕು ಶೋ, 300ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಪ್ರದರ್ಶನ ಕಂಡಿದ್ದು, ಒಂದು ವಾರಕ್ಕೆ 25. 5 ಕೋಟಿ ರೂ.ಕಲೆಕ್ಷನ್ ಮಾಡಿದೆ ಎಂದು ಗಾಂಧಿನಗರದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ.
ಮತ್ತೊಂದು ಕಡೆ ಗಾಂಧಿನಗರದಲ್ಲಿರುವ ವಿತರಕ ಜಯಣ್ಣ ಆಫೀಸ್ನಿಂದ, 25 ಕೋಟಿ ರೂ.ಗ್ರಾಸ್ ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ. ಆದರೆ, ಸಲಗ ಚಿತ್ರದ ನಿರ್ದೇಶಕ ದುನಿಯಾ ವಿಜಯ್ ಹಾಗೂ ನಿರ್ಮಾಪಕ ಶ್ರೀಕಾಂತ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸದ್ಯ ಸಲಗ ಸಿನಿಮಾ ಒಂದು ವಾರಕ್ಕೆ ಬಾಕ್ಸ್ ಆಫೀಸ್ ನಲ್ಲಿ 25.5 ಕೋಟಿ ಕಲೆಕ್ಷನ್ ಮಾಡಿರುವುದು ನಿಜ ಎನ್ನುತ್ತಿದ್ದಾರೆ ಗಾಂಧಿನಗರದ ಸಿನಿಮಾ ಪಂಡಿತರು. ಇದರ ಜತೆಗೆ ಮುಂದಿನ ವಾರದಿಂದ ದುನಿಯಾ ವಿಜಯ್ ಅಂಡ್ ಟೀಮ್ ಬೇರೆ ಬೇರೆ ಜಿಲ್ಲೆಗಳಿಗೆ ಸಲಗ ಯಾತ್ರೆ ಮಾಡಲು ಸಜ್ಜಾಗಿದೆ.
ಇದನ್ನೂ ಓದಿ:ಸಲಗ ಸಕ್ಸಸ್ಗಾಗಿ ತಮಿಳುನಾಡಿನ ಶ್ರೀ ವಕ್ರಕಾಳಿ ಅಮ್ಮನ ದರ್ಶನ ಪಡೆದ ವಿಜಯ್.!