ಕರ್ನಾಟಕ

karnataka

ETV Bharat / sitara

ಸಖತ್ ಸದ್ದು ಮಾಡುತ್ತಿದೆ‌ 'ಕಡಲ ತೀರದ ಭಾರ್ಗವ' ಚಿತ್ರದ ಟೀಸರ್

ನಮ್ಮ ಚಿತ್ರ ಹಿರಿಯ ಸಾಹಿತಿ 'ಶಿವರಾಮ ಕಾರಂತ'ರ ಕುರಿತಾದುದ್ದಲ್ಲ. ಇದರಲ್ಲಿ ನಾಯಕನ ಹೆಸರು‌‌ ಭಾರ್ಗವ. ಆತ ಕಡಲ ತೀರದವನು. ಇನ್ನೊಂದು ರೀತಿಯಲ್ಲಿ ವಿಷ್ಣುವಿನ 6ನೇ ಅವತಾರ ಪರಶು ರಾಮ. ಆತನನ್ನು ಭಾರ್ಗವ ರಾಮ‌ ಎಂತಲೂ ಕರೆಯುತ್ತಾರೆ..

kadala theerada bhargava kannada movie
'ಕಡಲ ತೀರದ ಭಾರ್ಗವ' ಚಿತ್ರ ತಂಡ

By

Published : Oct 20, 2021, 3:11 PM IST

ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ನಾಯಕರಾಗಿ ನಟಿಸಿರುವ ಚಿತ್ರ 'ಕಡಲ ತೀರದ ಭಾರ್ಗವ'. ಸದ್ಯ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

'ಕಡಲ ತೀರದ ಭಾರ್ಗವ' ಚಿತ್ರ ತಂಡ

ನಮ್ಮ ಚಿತ್ರ ಹಿರಿಯ ಸಾಹಿತಿ ಶಿವರಾಮ ಕಾರಂತರ ಕುರಿತಾದುದ್ದಲ್ಲ. ಇದರಲ್ಲಿ ನಾಯಕನ ಹೆಸರು‌‌ ಭಾರ್ಗವ. ಆತ ಕಡಲ ತೀರದವನು. ಇನ್ನೊಂದು ರೀತಿಯಲ್ಲಿ ವಿಷ್ಣುವಿನ 6ನೇ ಅವತಾರ ಪರಶು ರಾಮ. ಆತನನ್ನು ಭಾರ್ಗವ ರಾಮ‌ ಎಂತಲೂ ಕರೆಯುತ್ತಾರೆ.

ಭಾರ್ಗವ ರಾಮ ಸಾವಿಲ್ಲದವ. ದುಷ್ಟ ಕ್ಷತ್ರಿಯರನ್ನು ಧ್ವಂಸ ಮಾಡಿದವ. ನಮ್ಮ ನಾಯಕನ‌ ಪಾತ್ರದಲ್ಲೂ ಈ ಗುಣಗಳಿವೆ.‌ ಹಾಗಾಗಿ, ಈ ಶೀರ್ಷಿಕೆ ಸೂಕ್ತ ಎನಿಸಿತು. ಸದ್ಯ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದೇವೆ‌.

ನವೆಂಬರ್ ಮೊದಲ ವಾರದಲ್ಲಿ ಟ್ರೇಲರ್ ಬರಲಿದೆ.‌ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರವನ್ನು ತೆರೆಗೆ ತರುವ ತಯಾರಿ ನಡೆಯುತ್ತಿದೆ ಎಂದು ನಿರ್ದೇಶಕ ಪನ್ನಗ ಸೋಮಶೇಖರ್ ತಿಳಿಸಿದ್ದಾರೆ.

ವ್ಯಕ್ತಿಯಲ್ಲಿ ಎರಡೂ ಗುಣಗಳಿರುತ್ತವೆ

ನಾನು, ನಿರ್ದೇಶಕರು ಹಾಗೂ ಚಿತ್ರದ ಮತ್ತೊಬ್ಬ ನಾಯಕ ಭರತ್ ಗೌಡ ಹತ್ತು ವರ್ಷಗಳಿಂದ ಸ್ನೇಹಿತರು. ಹಿಂದೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದೆ.‌ ಆ ಸಮಯದಲ್ಲಿ ಈ ಕಥೆ ಕೇಳಿದೆ. ಹಾಗೆ ಚಿತ್ರ ಆರಂಭವಾಯಿತು. ಭಾರ್ಗವನ ಪಾತ್ರದಲ್ಲಿ ‌ನಾನು ನಟಿಸುತ್ತಿದ್ದೇನೆ. ಒಬ್ಬ ವ್ಯಕ್ತಿಯಲ್ಲಿ ಹೀರೋ ಹಾಗೂ ವಿಲನ್​​ ಎರಡೂ ಗುಣಗಳಿರುತ್ತವೆ. ನನ್ನದು ಇದೇ ರೀತಿ ಪಾತ್ರ ಎನ್ನುತ್ತಾರೆ ನಾಯಕ 'ವರುಣ್ ರಾಜು ಪಟೇಲ್'.

'ಕಡಲ ತೀರದ ಭಾರ್ಗವ' ಚಿತ್ರ ತಂಡ

ನಾನು ಹಾಗೂ ಪನ್ನಗ ಸೋಮಶೇಖರ್ ಗೆಳೆಯರು. ಹಾಗೆ ನಿರ್ದೇಶಕರು ವರುಣ್ ಕೂಡ ಸ್ನೇಹಿತರು. ನಿರ್ದೇಶಕರು ಹೇಳಿದ ಕತೆ ನನ್ನ ಮನ ತಟ್ಟಿತು. ಆ ನಂತರ ನಿರ್ಮಾಪಕರ ಹುಡುಕಾಟ. ಕೊನೆಗೆ ವರುಣ್, ನಾನು ಸೇರಿ ನಿರ್ಮಾಣ ಆರಂಭಿಸಿದ್ದೆವು. ನನ್ನ ಸ್ನೇಹಿರೊಬ್ಬರ ಬಳಿ ನಿರ್ಮಾಣ ಮಾಡುತ್ತಿದ್ದೇನೆ ಎಂದು ಹೇಳಿದಾಗ, ಇದೊಂದು ತಪ್ಪಸ್ಸಿನ ತರಹ ಎಂದರು. ಆಮೇಲೆ ಆ ಮಾತಿನ ಅರ್ಥವಾಯಿತು.

ಎರಡು ವರ್ಷಗಳ ಹಿಂದೆ ಚಿತ್ರೀಕರಣ ಆರಂಭಿಸಿದಾಗ ಕಡಲ ತೀರದ ಕಡೆ ಎಂದೂ ಕೇಳರಿಯದ ಮಳೆ. ಡಿಸೆಂಬರ್ ತನಕ ಯೆಲ್ಲೋ ಅಲರ್ಟ್ ಘೋಷಣೆ. ‌ಆನಂತರ ಋಷಿಗಳ ತಪ್ಪಸ್ಸಿಗೆ ರಾಕ್ಷಸರು ಅಡ್ಡಿಪಡಿಸಿದಂತೆ, ನಮಗೆ ತೊಂದರೆ ಕೊಡಲು ಕೊರೊ‌ನಾ ಬಂತು. ಈಗ ನಮ್ಮ ಚಿತ್ರ ಎಲ್ಲಾ ಅಡ್ಡಿ ಆತಂಕಗಳನ್ನು ದಾಟಿ ಬಿಡುಗಡೆಯ ಹಂತ ತಲುಪಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ಮತ್ತೊಬ್ಬ ನಾಯಕ ಭರತ್ ಗೌಡ ಹೇಳಿದರು.

ನಿರ್ದೇಶಕ ಪನ್ನಗ ಸೋಮಶೇಖರ್

ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಇಂಪನ.‌ ಸದಾ ಕೆಲಸದೊತ್ತಡದಲ್ಲಿರುವ ಅಪ್ಪ. ಎಲ್ಲದಕ್ಕೂ ಕಂಟ್ರೋಲ್‌ ಮಾಡುವ ಅಮ್ಮ. ಅದರಿಂದ ಆಕೆಗೆ ಚಿಕ್ಕಂದಿನಿಂದಲೂ ಕುಟುಂಬದ ಪ್ರೀತಿ ಸಿಕ್ಕಿರುವುದಿಲ್ಲ. ಆದರೆ‌, ಅವಳ ಭಾವನೆ ಹೇಳಿಕೊಳ್ಳಲು ಒಬ್ಬರು ಆಂಟಿ ಇರುತ್ತಾರೆ. ನಂತರ ಅವರು ಅಸುನೀಗುತ್ತಾರೆ. ಆನಂತರ ಇಂಪನಾಗೆ ನಾಯಕ ಭರತ್ ಸಿಗುತ್ತಾನೆ. ಮುಂದಿನದು ಚಿತ್ರದಲ್ಲಿ ನೋಡಬೇಕು ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು ನಾಯಕಿ, ಬಿಗ್‌ ಬಾಸ್ ಖ್ಯಾತಿಯ ಶೃತಿ ಪ್ರಕಾಶ್.

ವರುಣ್ ರಾಜು ಪಟೇಲ್, ಭರತ್ ಗೌಡ, ಶೃತಿ ಪ್ರಕಾಶ್, ಈಟಿವಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ಕಳೆದ ಎರಡು ವರ್ಷಗಳಿಂದ ಯಾರನ್ನು ಭೇಟಿಯಾಗಿರಲಿಲ್ಲ. ಎಲ್ಲರನ್ನೂ ನೋಡಿ ಸಂತೋಷವಾಗಿದೆ. ಇತ್ತೀಚಿನ ದಿನಗಳಲ್ಲಿ ನನಗೆ ತುಂಬಾ ಹಿಡಿಸಿರುವ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ. ಚಿತ್ರ ತಂಡಕ್ಕೆ ಶುಭಾವಾಗಲಿ ಎಂದು ನಟ ಈಟಿವಿ ಶ್ರೀಧರ್ ಹಾರೈಸಿದ್ದಾರೆ.

ಚಿತ್ರದ ಶೀರ್ಷಿಕೆ ನನಗೆ ಬಹಳ ಹಿಡಿಸಿತು. ಮೂಲತಃ ನಿರ್ದೇಶಕರು ಗಿಟಾರ್ ಪ್ಲೇಯರ್. ಅವರಿಗೆ ಸಂಗೀತ ಜ್ಞಾನವಿರುವುದರಿಂದ ಉತ್ತಮ ಹಾಡುಗಳು ಮೂಡಿ ಬರಲು ಸಹಕಾರಿಯಾಯಿತು. ಒಂದು ಬಿಟ್ ಸಾಂಗ್ ಸೇರಿದಂತೆ 9 ಹಾಡುಗಳಿದೆ. ಖ್ಯಾತ ಗೀತ ರಚನೆಕಾರರು ಬರೆದಿರುವ ಈ ಚಿತ್ರದ ಹಾಡುಗಳನ್ನು ಪ್ರಸಿದ್ಧ ಗಾಯಕರು ಹಾಡಿದ್ದಾರೆ ಎಂದು ಚಿತ್ರದ ಸಂಗೀತದ ಬಗ್ಗೆ ಸಂಗೀತ ನಿರ್ದೇಶಕ ಅನಿಲ್ ಸಿ ಜೆ ಮಾಹಿತಿ ನೀಡಿದರು.

ಚಿತ್ರದ ನಾಯಕರಾದ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ಈ ಚಿತ್ರದ ನಿರ್ಮಾಪಕರು. ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನಿಲ್ ಸಿ ಜೆ ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ, ಉಮೇಶ್ ಭೋಸಗಿ ಅವರ ಸಂಕಲನವಿದೆ.

ಇದನ್ನೂ ಓದಿ:ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ಶೃತಿ ಪ್ರಕಾಶ್ ನಟನೆಯ ಚಿತ್ರ

ABOUT THE AUTHOR

...view details