ಸ್ಯಾಂಡಲ್ವುಡ್ನಲ್ಲಿ ಡಬ್ ಚಿತ್ರಗಳಿಗೆ ಹಾದಿ ಸುಗಮವಾಗುತ್ತಿದೆ. ನಿರಂತರ ಹೋರಾಟದಿಂದಾಗಿ ಪರಭಾಷೆ ಚಿತ್ರಗಳು ಕನ್ನಡದಲ್ಲಿಯೇ ಡಬ್ ಆಗಿ ಬಿಡುಗಡೆಯಾಗುತ್ತಿವೆ.
ಕೆಲ ದಿನಗಳ ಹಿಂದೆಯಷ್ಟೇ ತಮಿಳಿನ ಅಜೀತ್ ನಟನೆಯ ವಿಶ್ವಾಸಂ ಹಾಗೂ ಮಲೆಯಾಳಂನ ಒರು ಆಡಾರ್ ಲವ್ ಕನ್ನಡ ಭಾಷೆಗೆ ಡಬ್ ಆಗಿದ್ದವು. ಇದೀಗ ಹಾಲಿವುಡ್ನ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್; ಹಾಬ್ಸ್ ಆ್ಯಂಡ್ ಶಾ' ಆವತರಣೆಯೊಂದು ಡಬ್ ಆಗುತ್ತಿದ್ದು, ನಿನ್ನೆಯಷ್ಟೇ ಕನ್ನಡ ಭಾಷೆಯಲ್ಲಿರುವ ಟ್ರೇಲರ್ ರಿಲೀಸ್ ಆಗಿದೆ. ಯುನಿವರ್ಸಲ್ ಫಿಕ್ಚರ್ಸ್ ಇಂಡಿಯಾ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದೆ.
ಈಗಾಗಲೇ ಎಂಟು ಸರಣಿಗಳಲ್ಲಿ ತೆರೆಕಂಡಿರುವ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್; ಹಾಬ್ಸ್ ಆ್ಯಂಡ್ ಶಾ' ಈಗ ಹೊಸ ಕಥೆಯೊಂದಿಗೆ ತೆರೆಗೆ ಬರುತ್ತಿದೆ. ಡ್ವೇನ್ ಜಾನ್ಸನ್, ಜೇಸನ್ ಸ್ಟಾಥಮ್, ಇಡಿರಿಸ್ ಎಲ್ಬಾ, ವನೆಸ್ಸಾ ಕಿರ್ಬಿ ಮತ್ತು ಹೆಲೆನ್ ಮಿರ್ರೆನ್ ನಟಿಸಿರುವ ಈ ಆ್ಯಕ್ಷನ್ ಚಿತ್ರಕ್ಕೆ ಡೇವಿಡ್ ಲೀಚ್ ನಿರ್ದೇಶನ ಮಾಡಿದ್ದಾರೆ. 2.24 ನಿಮಿಷದ ಈ ಟ್ರೇಲರ್ನಲ್ಲಿ ಮೈನವಿರೇಳಿಸುವ ಫೈಟ್, ಆ್ಯಕ್ಷನ್ ಸೀನ್ಗಳು ತುಂಬಿ ತುಳುಕುತ್ತಿವೆ. ಅದ್ಭುತವಾಗಿ ಮೂಡಿ ಬಂದಿರುವ ಟ್ರೇಲರ್ ಕನ್ನಡಿಗರ ಚಿತ್ತ ಸೆಳೆಯುತ್ತಿದೆ.
ಇನ್ನು ಕನ್ನಡದಲ್ಲಿ ಮೂಡಿ ಬಂದಿರುವ ಈ ಟ್ರೇಲರ್ನ್ನು ಡಬ್ಬಿಂಗ್ ಪರ ಹೋರಾಟಗಾರರು, ಕನ್ನಡ ಸಿನಿ ರಸಿಕರು ತೆರೆದ ಹೃದಯದಿಂದ ಗ್ರ್ಯಾಂಡ್ ಆಗಿ ಸ್ವಾಗತಿಸಿದ್ದಾರೆ.