77 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ನೆಲೆಯೂರಿದ್ದ ಒಗ್ಗರಣೆ ಡಬ್ಬ ಖ್ಯಾತಿಯ ಮುರಳಿ ಸದ್ಯ ಏನು ಮಾಡುತ್ತಿದ್ದಾರೆ ? ಅವರ ಮುಂದಿನ ಪ್ಲಾನ್ಗಳೇನು? ಬಿಗ್ ಮನೆಯಿಂದ ಅವರಿಗೆ ಸಿಕ್ಕಿರುವ ದುಡ್ಡು ಎಷ್ಟು ? 11 ವಾರಗಳ ವರೆಗೆ ಅವರ ಬಿಗ್ ಜರ್ನಿ ಹೇಗಿತ್ತು ಎಂಬುದರ ಕುರಿತು ನಮ್ಮ ಪ್ರತಿನಿಧಿ ಅಕ್ಷರಾ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಮುರಳಿ ಹಂಚಿಕೊಂಡಿದ್ದಾರೆ.
ಬಿಗ್ ಮನೆ ಹೊಸ ಪ್ರಪಂಚದಂತೆ. ಅಲ್ಲಿಂದ ಸಾಕಷ್ಟು ಕಲಿಯುತ್ತೇವೆ ಎನ್ನುವ ಮುರಳಿ, ಈ ಶೋ ಸ್ಕ್ರಿಪ್ಟ್ ಮೂಲಕ ನಡೆಯುವುದಿಲ್ಲ ಎನ್ನುತ್ತಾರೆ. ಜೀವನದ ಪಾಠವನ್ನು ಬಿಗ್ಬಾಸ್ ಮನೆಯಲ್ಲಿ ಆಟವನ್ನಾಗಿ ಕೊಟ್ಟಿರುತ್ತಾರೆ. ಅದು ಅದ್ಭುತವಾದ ಅನುಭವ. ವಿವಿಧ ವ್ಯಕ್ತಿತ್ವದ 18 ಜನರ ಜತೆ ಒಂದೇ ಮನೆಯಲ್ಲಿ ಕಳೆಯುವುದೇ ಒಂದು ಸಾಧನೆಯಂತಿರುತ್ತೆ. ಮನೆಯಲ್ಲಿ ಇರುವಷ್ಟು ದಿನ ಹೊರಗಿನವರ ಪರಿಚಯ ಇರುವುದಿಲ್ಲ. ದುಡ್ಡು, ಗಡಿಯಾರ, ಪುಸ್ತಕ, ಪೆನ್ನೂ ಏನೂ ಇರುವುದಿಲ್ಲ. ಅಲ್ಲಿದ್ದಾಗ ಎಲ್ಲವನ್ನು ಮರೆಯುತ್ತೇವೆ. ನಾನೂ ಕೂಡ ಮನೆಯಿಂದ ಹೊರ ಬಂದ ಬಳಿಕ ಮೊಬೈಲ್ ನಂಬರ್ಗಳು, ಪಿನ್ ನಂಬರ್ಗಳನ್ನು ಹೊಸದಾಗಿ ಪಡೆದಿದ್ದೇನೆ ಎಂದರು.
11 ವಾರಗಳ ವರೆಗೆ ಬಿಗ್ ಜರ್ನಿ ಹೇಗಿತ್ತು ಎಂಬುದರ ಕುರಿತು ನಮ್ಮ ಪ್ರತಿನಿಧಿ ಅಕ್ಷರಾ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಒಗ್ಗರಣೆ ಡಬ್ಬ ಖ್ಯಾತಿಯ ಮುರಳಿ. ಸದ್ಯ ಮುರಳಿ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ಗಳಿವೆಯಂತೆ. ಬೇರೆ ಬೇರೆ ವಾಹಿನಿಗಳಿಗೆ ಕಾರ್ಯಕ್ರಮ ಮಾಡಿಕೊಡಲಿದ್ದಾರಂತೆ. ಶೀಘ್ರದಲ್ಲಿ ಒಗ್ಗರಣೆ ಡಬ್ಬ ಸೀಸನ್ 2 ಕೂಡ ಪ್ರಾರಂಭವಾಗಲಿದೆಯಂತೆ.
ಮುರಳಿ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಅವರ ಕಾಲೆಳೆದಿದ್ದರು. ಒಂದು ವೇಳೆ ನಾನು ಬಿಗ್ಬಾಸ್ ಗೆದ್ದರೆ, ಅದರಿಂದ ಬರುವ ಹಣದಲ್ಲಿ ಮೊದಲು ತೆರಿಗೆ ಕಟ್ಟುತ್ತೇನೆ ಎಂದು ಹೇಳಿದ್ದರು. ಪುನಃ ಈ ಪ್ರಸಂಗ ಮೆಲುಕು ಹಾಕಿದ ಮುರಳಿ, ಸುದೀಪ್ ಅವರಿಗೆ ಕಾಲೆಳೆಯೋಕೆ ಆಗುತ್ತಾ? ಅಂದು ಸುಮ್ಮನೆ ಹೇಳಿದೆ. ಸಹಜವಾಗಿ ನಾವು ಟಾಕ್ಸ್ ಕಟ್ಟಬೇಕಲ್ವಾ? ಈಗಲೂ ಕೂಡ ನಾನು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಲೇ ಇದ್ದೇನೆ ಎಂದರು.
ಇನ್ನು ಬಿಗ್ಬಾಸ್ ಮನೆಯಿಂದ ಎಷ್ಟು ದುಡ್ಡು ಸಿಕ್ತು ಎನ್ನುವ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ತಾವು ಪಡೆದ ಸಂಭಾವನೆ ಮೊತ್ತ ಎಷ್ಟು ಅನ್ನೋದು ಬಿಟ್ಟುಕೊಡಲಿಲ್ಲ. ಬದಲಾಗಿ ನಾವು ಡಿಮ್ಯಾಂಡ್ ಮಾಡಿದ್ದಷ್ಟು ಅವರು ಕೊಟ್ರು. ನಾಲ್ಕು ವರ್ಷಗಳಿಂದ ನನಗೆ ಆಫರ್ ಮಾಡುತ್ತಿದ್ದರು. ಆದರೆ, ನಾನೇ ಹೋಗಿರಲಿಲ್ಲ ಎಂಬುದನ್ನು ರಿವೀಲ್ ಮಾಡಿದ್ರು.