ಈ ಬಾರಿ ಬಿಗ್‍ಬಾಸ್ ರಿಯಾಲಿಟಿ ಶೋ ಗೆಲ್ಲುವ ಅವಕಾಶ ನನಗೆ ಇತ್ತು ಎಂದು ಬಿಗ್‍ಬಾಸ್ ಸ್ಪರ್ಧಿ ಮಂಜು ಪಾವಗಡ ಅಭಿಪ್ರಾಯಪಟ್ಟಿದ್ದಾರೆ.
ಬಿಗ್‍ಬಾಸ್ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಪ್ರಥಮ ಬಾರಿಗೆ ಮಂಜು ಪಾವಗಡ ಫೇಸ್ ಬುಕ್ ಲೈವ್ ಬಂದಿದ್ದು, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನನಗೆ ಬಿಗ್‍ಬಾಸ್ ಟ್ರೋಫಿ ಗೆಲ್ಲುವ ಅವಕಾಶ ಇತ್ತು. ಟಾಸ್ಕ್ಗಳಲ್ಲೂ ಉತ್ತಮವಾಗಿ ಆಡುತ್ತಿದ್ದೆ. ಎಲ್ಲರೊಂದಿಗೂ ಚೆನ್ನಾಗಿ ಇದ್ದೆ. ಮೊದಲ ನಲವತ್ತು ದಿನ ಎಲ್ಲರನ್ನು ನಗಿಸುತ್ತಿದ್ದೆ ನಂತರ ಸ್ವಲ್ಪ ಕಡಿಮೆಯಾಯಿತು. ಮತ್ತೆ ಟ್ರ್ಯಾಕಿಗೆ ಬರುವ ಹೊತ್ತಿಗೆ ಬಿಗ್‍ಬಾಸ್ ರದ್ದಾಯಿತು. ನನಗೆ ತುಂಬಾ ಕಾನ್ಫಿಡೆನ್ಸ್ ಇತ್ತು ಈ ಬಾರಿ ನಾನೇ ಗೆಲ್ಲುವುದು ಎಂದು. ಆದರೆ ವಿಪರ್ಯಾಸ ಎಂದರು.
ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದ ನಂತರ ಫೋನ್ ಕಾಲ್ ಬರುತ್ತಿದೆ. ತುಂಬಾ ಖುಷಿಯಾಗ್ತಿದೆ ಎಲ್ಲರ ಅಭಿಮಾನ ಪ್ರೀತಿ ಹೀಗೆ ಇರಲಿ. ನಾನು ಬಿಗ್‍ಬಾಸ್ ಅಭಿಮಾನಿಯಾಗಿದ್ದೆ. ಆದರೆ ಸ್ಪರ್ಧಿಯಾಗಿದ್ದು ಸಂತೋಷ ತಂದುಕೊಟ್ಟಿತು. ಬಿಗ್‍ಬಾಸ್ ಅರ್ಧಕ್ಕೆ ನಿಂತಿದೆ. ಆದರೂ ಎಲ್ಲರ ಆರೋಗ್ಯ ಮುಖ್ಯ. ಹೊರಗೆ ಬಂದ ಮೇಲೆ ಗೊತ್ತಾಯ್ತು ಪರಿಸ್ಥಿತಿಯ ಅರಿವಾಯಿತು. ಮುಂದಿನ ಜೀವನ ಬಗ್ಗೆ ಕೊರೊನಾ ನಂತರ ಯೋಚಿಸುತ್ತೇನೆ. ಅವಕಾಶ ಬರತ್ತೆ. ಸಿನಿಮಾ, ಶೋ ಗಳಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.
ದೊಡ್ಡ ವೇದಿಕೆ ಮೇಲೆ ಹೋಗುವುದೇ ಕನಸು. ಪ್ರತಿ ಕ್ಷಣವೂ ಖುಷಿ, ಮುಖ್ಯವಾಗಿತ್ತು. ಪ್ರೀತಿ, ವಿಶ್ವಾಸಗಳಿಸಿದ್ದೇನೆ. ಆತ್ಮವಿಶ್ವಾಸ ಹೆಚ್ಚಾಗಿದೆ. ತುಂಬಾ ಪಾಠ ಕಲಿತಿದ್ದೇನೆ. ಸುದೀಪ್ ಸರ್ ಉಡಾಫೆ ಎಂದಾಗ ಬೇಜಾರಾಯ್ತು. ಎರಡು ದಿನ ಯೋಚಿಸಿ, ತಪ್ಪು ತಿದ್ದುಕೊಂಡಿದ್ದೇನೆ. ಶುಭಾ ಮಾಡುವ ತರಲೆ ತುಂಬಾ ಇಷ್ಟ. ಗುಂಡಮ್ಮ ಐ ಮಿಸ್ ಯೂ. ಮಗು ತರಹ ಮಾತಾಡ್ತಾರೆ ಎಂದು ಹೇಳಿದರು.
ನಂಬಿಕೆ ಅನ್ನೋದು ಸತ್ಯನಾ ಸುಳ್ಳೋ ಗೊತ್ತಾಗಲ್ಲ. ರಂಗಭೂಮಿಯ ಅನುಭವ ನನ್ನನ್ನು ಗಟ್ಟಿಗೊಳಿಸಿದೆ. ನನ್ನ ಕೆಲಸಕ್ಕಷ್ಟೇ ಬೆಲೆ ಕೊಡ್ತೀನಿ. ಕೆಲಸನಾ ಪ್ರೀತಿಸಬೇಕು. ಆಗ ಹೆದರುವ ಅವಶ್ಯಕತೆ ಇಲ್ಲ. ನಾನು ಅಲ್ಲಿ ಗೆದ್ದಿದ್ದೇನೋ ಬಿಟ್ಟಿದ್ದೇನೋ ಗೊತ್ತಿಲ್ಲ. ಆದ್ರೆ ಇಷ್ಟು ಜನ ನನ್ನನ್ನು ಇಷ್ಟಪಟ್ಟರಲ್ಲ ಅಷ್ಟೇ. ನಾನು ಆಲ್ ಮೋಸ್ಟ್ ಗೆದ್ದಿದ್ದೇನೆ. ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.
ಫೇಸ್ಬುಕ್ ಲೈವ್ನಲ್ಲಿ ಮಾತನಾಡುವಾಗ ದಿವ್ಯ ಸುರೇಶ್ ಬಗ್ಗೆ ಮಂಜು ಪಾವಗಡ ಮಾತನಾಡಲಿಲ್ಲ. ಲೈವ್ ಮಧ್ಯದಲ್ಲಿ ಕೆಲವೊಮ್ಮೆ ನಂಬಿಕೆ ವಿಷಯದ ಬಗ್ಗೆ ಮಾರ್ಮಿಕವಾಗಿ ಕೂಡ ಮಾತನಾಡಿದರು. ಮನೆಯ ಅನೇಕರ ಹೆಸರನ್ನು ಹೇಳಿ ಆಪ್ತರು ಎಂದರು. ಆದರೆ ದಿವ್ಯ ಅವರ ಹೆಸರನ್ನು ಕೊನೆಯದಾಗಿ ತೆಗೆದುಕೊಂಡರು.
ದಿವ್ಯಾ ಸುರೇಶ್ ಕೊನೆಯದಾಗಿ ಹೊರಡುವ ಕೆಲ ಗಂಟೆಗಳ ಹಿಂದೆ ಮಂಜು ಅವರಿಗೆ ಮನೆಗೆ ಬಾ, ನಮ್ಮ ತಾಯಿಯನ್ನು ಪರಿಚಯಿಸುತ್ತೇನೆ. ನಿನ್ನ ಮದುವೆಗೆ ನನ್ನನ್ನು ಕರಿ ಎಂದು ಹೇಳಿ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗಪಡಿಸಿದರು. ನಂತರ ಮಂಜು ಮರುಮಾತನಾಡದೆ ಶಾಂತವಾದರು.