ನಟ ಸುದೀಪ್ಗೆ ಅಡುಗೆ ಮಾಡುವುದು ಇಷ್ಟ ಎಂಬ ವಿಷಯ ಹೊಸದೇನಲ್ಲ. ಈಗಾಗಲೇ ಅವರು ಕೆಲವು ವರ್ಷಗಳ ಹಿಂದೆಯೇ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಕಿಚ್ಚನ ಕಿಚ್ಚನ್ ಎಂಬ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಅದರಲ್ಲಿ ಅಡುಗೆ ಮಾಡುತ್ತಲೇ ಹಲವು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದರು. ಇದೀಗ ಸುದೀಪ್ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ಒಂದು ಅಡುಗೆ ಕಾರ್ಯಕ್ರಮವನ್ನು ಹೋಸ್ಟ್ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ.
'ಮಾಸ್ಟರ್ ಚೆಫ್' ಆಗುವುದಕ್ಕೆ ಹೊರಟಿದ್ದಾರೆ ಸುದೀಪ್ - ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಕಾರ್ಯಕ್ರಮ
ನಟ ಸುದೀಪ್ ಅವರಿಗೆ ಅಡುಗೆ ಮಾಡುವುದೆಂದರೆ ಇಷ್ಟ ಎಂದು ಎಲ್ಲರಿಗೂ ತಿಳಿದಿದೆ. ಈದೀಗ ಸುದೀಪ್ ಅವರು ಹೊಸದೊಂದು ಅಡುಗೆ ಕಾರ್ಯಕ್ರಮವನ್ನು ಹೋಸ್ಟ್ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಕಾರ್ಯಕ್ರಮ ಆರಂಭವಾಗುವ ಸಾಧ್ಯತೆ ಇದೆ.
ಅಮೆರಿಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು ಮಾಸ್ಟರ್ ಚೆಫ್. ಈಗ ಈ ಕಾರ್ಯಕ್ರಮವನ್ನು ಭಾರತಕ್ಕೆ ತರಲಾಗುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಈ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಕನ್ನಡದಲ್ಲಿ ಈ ಕಾರ್ಯಕ್ರಮವನ್ನು ಸುದೀಪ್ ನಡೆಸಿ ಕೊಡಲಿದ್ದಾರೆ. ಇನ್ನು ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ವೆಂಕಟೇಶ್ ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್ ನಡೆಸಿಕೊಡಲಿದ್ದಾರೆ.
ಸನ್ ನೆಟ್ವರ್ಕ್ನ ಚಾನೆಲ್ಗಳಲ್ಲಿ ಈ ಕಾರ್ಯಕ್ರಮ ಮೂಡಿ ಬರಲಿದ್ದು, ಕನ್ನಡದಲ್ಲಿ ಉದಯ ಟಿವಿಯಲ್ಲಿ ಮಾಸ್ಟರ್ ಚೆಫ್ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮ ಯಾವಾಗ ಪ್ರಸಾರವಾಗುತ್ತದೆ. ಯಾರು ನಿರ್ದೇಶಿಸುತ್ತಾರೆ ಮುಂತಾದ ಹಲವು ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಸದ್ಯ ನಟ ಸುದೀಪ್ ಬಿಗ್ಬಾಸ್ನಲ್ಲಿ ಬ್ಯುಸಿಯಾಗಿದ್ದು, ಬಿಗ್‍ಬಾಸ್ ಮುಗಿದ ನಂತರ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.