'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಕ್ರಾಂತ್ ಪಾತ್ರ ನಿರ್ವಹಿಸುತ್ತಿರುವ ಹುಡುಗನ ಹೆಸರು ಬಹುಶ: ಎಲ್ಲರಿಗೂ ತಿಳಿದಿಲ್ಲ. ಈತನ ಹೆಸರು ಅಭಿಷೇಕ್. ಈ ಹುಡುಗ ಮೈಸೂರಿನವರು. ನಾಯಕ ವಸಿಷ್ಠ ವೇದಾಂತ್ ಸಹೋದರ ವಿಕ್ರಾಂತ್ ಆಗಿ ನಟಿಸುವ ಮೂಲಕ ರಾಜ್ಯದ ಜನರ ಮನ ಗೆದ್ದಿದ್ದಾರೆ ಅಭಿಷೇಕ್.
ಅಭಿಷೇಕ್ಗೆ ಮೊದಲಿನಿಂದಲೂ ನಟಿಸುವ ಆಸೆ ಇತ್ತು. ಆ್ಯಕ್ಟಿಂಗ್ ಕಲಿಯುವ ಕಾರಣ ವರ್ಕ್ಶಾಪ್ ಸೇರುವ ನಿರ್ಧಾರ ಮಾಡಿದರು. ಮೈಸೂರಿನ ಕಲಾಮಂದಿರದಲ್ಲಿ ನಾಟಕದ ವರ್ಕ್ಷಾಪ್ಗೆ ಕೂಡಾ ಸೇರಿದರು. ಅಲ್ಲಿ ನಟನೆಯ ರೀತಿ ನೀತಿಗಳನ್ನು ಅರಿತ ಅಭಿಷೇಕ್ ನಂತರ ಸ್ಟಾರ್ ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ಪ್ರೋಗ್ರಾಂನಲ್ಲಿ ಭಾಗವಹಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಯೂ' ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸಿದ ಅಭಿಷೇಕ್ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ವಿಕ್ರಾಂತ್ ವಸಿಷ್ಠ ಆಗಿ ನಟಿಸುತ್ತಿದ್ದಾರೆ.
ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅಭಿಷೇಕ್ ಅದ್ಭುತ ಡ್ಯಾನ್ಸರ್ ಕೂಡಾ ಹೌದು. ಈಗಾಗಲೇ ಸುಮಾರು 500ಕ್ಕೂ ಹೆಚ್ಚು ಡ್ಯಾನ್ಸ್ ಪ್ರೋಗ್ರಾಂ ನೀಡಿರುವ ಅಭಿಷೇಕ್, ಕಳೆದ ವರ್ಷ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಫ್ಯಾಮಿಲಿ ವಾರ್ನಲ್ಲಿ ಭಾಗವಹಿಸಿದ್ದರು. ಪ್ರತಿ ವಾರವೂ ವಿಭಿನ್ನ ನೃತ್ಯ ಶೈಲಿಯ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದ ಅಭಿಷೇಕ್ ಅನಾರೋಗ್ಯದ ಕಾರಣದಿಂದ ಶೋ ವಿಗೆ ವಿದಾಯ ಹೇಳಿದಾಗ ಎಲ್ಲರಿಗೂ ಬೇಸರವಾಗಿತ್ತು.
ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ಅಂಬರೀಷ್ ಚಿಕ್ಕ ವಯಸ್ಸಿನವರಿದ್ದಾಗ ಅವರ ಬೆಸ್ಟ್ ಫ್ರೆಂಡ್ ಪಾತ್ರಕ್ಕೆ ಜೀವ ತುಂಬುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ ಈ ಕಿರುತೆರೆ ಪ್ರತಿಭೆ. ರೆಬಲ್ ಸ್ಟಾರ್ ಅವರೊಂದಿಗೆ ತೆರೆ ಹಂಚಿಕೊಂಡಿರುವುದು ನನ್ನ ಜೀವನದ ಮಹತ್ತರವಾದ ಕ್ಷಣ ಎನ್ನುವ ಅಭಿಷೇಕ್, ತೆಲುಗಿನ 'ಒಕ್ಕರಿಕಿ ಒಕ್ಕರು' ಸೀರಿಯಲ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಅವರೊಂದಿಗೆ ಜಾಹೀರಾತೊಂದರಲ್ಲಿ ಕೂಡಾ ಅಭಿಷೇಕ್ ನಟಿಸಿದ್ದಾರೆ.