ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇತ್ತೀಚೆಗೆ ಪುಟ್ಟೇನಹಳ್ಳಿಯಲ್ಲಿರುವ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದಾರೆ. ಸುದೀಪ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ 'ಪೈಲ್ವಾನ್' ಸಿನಿಮಾವನ್ನು ಕೆಲವು ಕಿಡಿಗೇಡಿಗಳು ಪೈರಸಿ ಮಾಡಿದ್ದರು. ಈ ನಡುವೆ ಅಭಿಮಾನಿಗಳ ನಡುವಿನ ಯುದ್ಧ. ಇವೆಲ್ಲದರ ಮಧ್ಯೆ ಪೊಲೀಸ್ ಆಯುಕ್ತರು ಸುದೀಪ್ ಮನೆಗೆ ಭೇಟಿ ನೀಡಿದ್ದಾರೆ.
ಸುದೀಪ್ ಮನೆಗೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್...ಕಾರಣ ಏನು...? - ಪೈಲ್ವಾನ್ ಪೈರಸಿ
ಪೈರಸಿಯಿಂದ ಕನ್ನಡ ಚಿತ್ರರಂಗಕ್ಕೆ ಎಷ್ಟು ನಷ್ಟ ಆಗುತ್ತಿದೆ ಎಂಬುದನ್ನು ಕಿಚ್ಚ ಸುದೀಪ್ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಜೊತೆ ಚರ್ಚಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಭಾಸ್ಕರ್ ರಾವ್ ಕೂಡಾ ಈ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಸುದೀಪ್ ಹಾಗೂ ಭಾಸ್ಕರ್ ರಾವ್ ಅವರ ನಡುವೆ ಮೊದಲಿನಿಂದಲೂ ಒಳ್ಳೆಯ ಬಾಂಧವ್ಯ ಇದೆ ಎನ್ನಲಾಗಿದೆ. ಭಾಸ್ಕರ್ ರಾವ್ ಸಂಚಾರ ವಿಭಾಗದಲ್ಲಿದ್ದಾಗ, ಸುದೀಪ್ ಅವರು ಟ್ರಾಫಿಕ್ ನಿಯಮಗಳ ಜಾಗೃತಿಗೆ ರಾಯಭಾರಿಯಾಗಿದ್ರು. ಈ ಸ್ನೇಹಕ್ಕಾಗಿ ಇಂದು ನಗರ ಪೊಲೀಸ್ ಆಯುಕ್ತ ಸುದೀಪ್ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸುದೀಪ್ ಪೈರಸಿಯಿಂದ ಕನ್ನಡ ಚಿತ್ರರಂಗಕ್ಕೆ ಎಷ್ಟು ನಷ್ಟ ಆಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ. ಇಂದು ನನ್ನ ಸಿನಿಮಾದ ಪೈರಸಿ ಮಾಡಿದ್ದಾರೆ, ನಾಳೆ ಮತ್ತೊಬ್ಬ ನಟನ ಸಿನಿಮಾಗೆ ಇದೇ ಪರಿಸ್ಥಿತಿ ಬರುತ್ತದೆ ಎಂದು ಪೈರಸಿ ವಿಚಾರವಾಗಿ ಸುದೀಪ್ ಭಾಸ್ಕರ್ ರಾವ್ ಜೊತೆ ಸುಧೀರ್ಘ ಚರ್ಚೆ ನಡೆಸಿದ್ದಾರೆ. ನಗರ ಆಯುಕ್ತರು ಕೂಡಾ ಸುದೀಪ್ ಮಾತಿಗೆ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸುದೀಪ್ ಹಾಗೂ ಅವರ ತಂದೆ ಸಂಜೀವ್ ಭಾಸ್ಕರ್ ರಾವ್ ಜೊತೆ ಇರುವ ಫೋಟೋವನ್ನು ಕಿಚ್ಚ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.