ಬೆಂಗಳೂರು:ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್, ರವಿಮಾಮ ಅಂತಾನೆ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿರುವ ನಟ ರವಿಚಂದ್ರನ್. ಸದ್ಯ ದೃಶ್ಯಂ-2, ರವಿ ಬೋಪಣ್ಣ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಈ ಮಧ್ಯೆ ಅವರು ತಮ್ಮ ದೊಡ್ಡ ಮಗನನ್ನು ಭೇಟಿಯಾಗಿದ್ದಾರೆ. ಅರೇ, ಅವರ ದೊಡ್ಡ ಮಗ ಮನೋರಂಜನ್ ಮನೆಯಲ್ಲೇ ಇರುತ್ತಾರೆ. ಮತ್ಯಾರನ್ನು ಭೇಟಿ ಮಾಡ್ತಾರೆ ಅನ್ನಿಸ್ತಿದ್ಯಾ. ಹೌದು, ಮಗನಷ್ಟೇ ಪ್ರೀತಿ ತೋರುವ ಕಿಚ್ಚ ಸುದೀಪ್ ಅವರನ್ನು ರವಿಚಂದ್ರನ್ ಭೇಟಿ ಮಾಡಿದ್ದಾರೆ. ಈ ಮಾತನ್ನು ರವಿಚಂದ್ರನ್ ಕೂಡ ಒಪ್ಪಿಕೊಂಡಿದ್ದಾರೆ.
ರವಿಚಂದ್ರನ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸುದೀಪ್ ಸುದೀಪ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಪೂರೈಸಿದ್ದ ವೇಳೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ಭೇಟಿಯಾಗಿದ್ದರು. ಬಳಿಕ ರವಿಚಂದ್ರನ್ ಹಾಗೂ ಸುದೀಪ್ ಮುಖಾಮುಖಿ ಭೇಟಿಯಾಗಿರಲಿಲ್ಲ. ಬಹಳ ದಿನಗಳ ಬಳಿಕ ರಾಜಾಜಿ ನಗರದಲ್ಲಿರುವ ರವಿಚಂದ್ರನ್ ನಿವಾಸಕ್ಕೆ ಕಿಚ್ಚ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾದ ಪ್ರೀಮಿಯರ್ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ರವಿಚಂದ್ರನ್ ಅವರನ್ನು ಆಹ್ವಾನಿಸಲು ಸುದೀಪ್, ರವಿಚಂದ್ರನ್ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ನಿರ್ಮಾಪಕ ಜಾಕ್ ಮಂಜು, ಕಿಚ್ಚನಿಗೆ ಸಾಥ್ ನೀಡಿದ್ದಾರೆ. ರವಿಚಂದ್ರನ್ - ಸುದೀಪ್ ಭೇಟಿಯಾಗಿರುವ ಫೋಟೋವನ್ನು ಕ್ರೇಜಿಸ್ಟಾರ್ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಬಹಳ ದಿನಗಳ ನಂತರ ನನ್ನ ದೊಡ್ಡಮಗನೊಂದಿಗೆ, ನಿನಗೆ ಸಾಕಷ್ಟು ಪ್ರೀತಿ ಎಂದು ಬರೆದುಕೊಂಡಿದ್ದಾರೆ.
ಸುದೀಪ್ ನಿರ್ದೇಶನ ಮಾಡಿರುವ ಮಾಣಿಕ್ಯ ಸಿನಿಮಾದಲ್ಲಿ ಸುದೀಪ್ ತಂದೆಯ ಪಾತ್ರದಲ್ಲಿ ರವಿಚಂದ್ರನ್ ನಟಿಸಿದರು. ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಸುದೀಪ್- ರವಿಚಂದ್ರನ್ ಜೋಡಿಯನ್ನು ಅಪ್ಪ ಮಗನಾಗಿ ಕರುನಾಡ ಜನತೆ ಒಪ್ಪಿಕೊಂಡಿದ್ದರು. ಈ ಬಾಂಧವ್ಯ ಇವತ್ತಿಗೂ ಹಾಗೇ ಮುಂದುವರೆದಿದೆ.
ಸದ್ಯ ಸುದೀಪ್ ನಟನೆಯ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ವಿಕ್ರಾಂತ್ ರೋಣ ಸಿನಿಮಾವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಪೋಸ್ಟರ್ ಹಾಗೂ ಟೀಸರ್ಗಳಿಂದಲೇ ಸದ್ದು ಮಾಡುತ್ತಿರುವ ವಿಕ್ರಾಂತ್ ರೋಣ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ 14 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.