ನಾಗಶೇಖರ್ ನಿರ್ದೇಶಿಸಿದ ಮೈನಾ, ಅರಮನೆ, ಸಂಜು ವೆಡ್ಸ್ ಗೀತಾ ಚಿತ್ರಗಳು 100 ದಿನಗಳನ್ನು ಪೂರೈಸಿ ಒಳ್ಳೆ ಹೆಸರು ಮಾಡಿತ್ತು. ಆದರೆ ನಂತರ ಅವರು ನಿರ್ದೇಶಿಸಿದ ಮಾಸ್ತಿಗುಡಿ ಹಾಗೂ ಅಮರ್ ಚಿತ್ರಗಳು ಅಂದುಕೊಂಡಂತೆ ಸಕ್ಸಸ್ ಕಾಣಲಿಲ್ಲ. ಇದೀಗ ನಾಗಶೇಖರ್ ತೆಲುಗು ಹಾಗೂ ಕನ್ನಡದಲ್ಲಿ ಎರಡು ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದಾರೆ.
'ಶ್ರೀ ಕೃಷ್ಣ@ಜಿಮೈಲ್.ಕಾಂ' ಎರಡನೇ ಹಂತದ ಚಿತ್ರೀಕರಣ ಆರಂಭ
ಡಾರ್ಲಿಂಗ್ ಕೃಷ್ಣ ಹಾಗೂ ನಾಗಶೇಖರ್ ಕಾಂಬಿನೇಷನ್ನಲ್ಲಿ ತಯಾರಾಗುತ್ತಿರುವ 'ಶ್ರೀ ಕೃಷ್ಣ@ಜಿಮೈಲ್.ಕಾಂ' ಚಿತ್ರದ ಎರಡನೇ ಹಂತದ ಚಿತ್ರೀಕರಣಕ್ಕೆ ನಾಗಶೇಖರ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಸಂದೇಶ್ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ.
'ಲವ್ ಮಾಕ್ಟೇಲ್' ತೆಲುಗು ರೀಮೇಕ್ 'ಗುರ್ತುಂದಾ ಶೀತಕಾಲಂ' ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ತಮನ್ನಾ ಹಾಗೂ ಸತ್ಯದೇವ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಕನ್ನಡದಲ್ಲಿ 'ಶ್ರೀ ಕೃಷ್ಣ@ಜಿಮೈಲ್.ಕಾಂ' ಚಿತ್ರೀಕರಣ ಸಾಗುತ್ತಿದೆ. ಮೈಸೂರಿನ ಸುಂದರ ಪ್ರದೇಶಗಳು ಹಾಗೂ ಜೋಗ್ ಜಲಪಾತದ ಬಳಿ ಚಿತ್ರೀಕರಣ ನಡೆಸಿ ಈಗ ಬೆಂಗಳೂರಿನಲ್ಲಿ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಇದು ಸಂದೇಶ್ ಕಂಬೈನ್ಸ್ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾ. ನಾಗಶೇಖರ್ ಲಾಕ್ ಡೌನ್ ಸಮಯದಲ್ಲಿ ಚಿತ್ತಕಥೆ ಸಿದ್ಧಪಡಿಸಿ ಮುಹೂರ್ತ ಕೂಡಾ ಮಾಡಿದ್ದರು.
ಇದೊಂದು ರೊಮ್ಯಾಂಟಿಕ್, ಕಾಮಿಡಿ ಸಿನಿಮಾವಾಗಿದ್ದು 'ಲವ್ ಮಾಕ್ಟೇಲ್' ಸಕ್ಸಸ್ ಖುಷಿಯಲ್ಲಿರುವ ಮದರಂಗಿ ಕೃಷ್ಣ ಅಲಿಯಾಸ್ ಡಾರ್ಲಿಂಗ್ ಕೃಷ್ಣ 'ಶ್ರೀ ಕೃಷ್ಣ@ಜಿಮೈಲ್.ಕಾಂ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೃಷ್ಣ ಪಂಚತಾರ ಹೋಟೆಲ್ ಸಪ್ಲೈಯರ್ ಆಗಿ ಪಾತ್ರ ಮಾಡುತ್ತಿದ್ದಾರೆ. ಇವರೊಂದಿಗೆ ಭಾವನ ಮೆನನ್, ಅಚ್ಯುತ್ ಕುಮಾರ್, ದತ್ತಣ್ಣ, ಸಾಧು ಕೋಕಿಲ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಸತ್ಯ ಹೆಗ್ಡೆ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನವಿದೆ. ಕವಿರಾಜ್ ಸಾಹಿತ್ಯ ಬರೆದಿರುವ ಮೂರು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.