ಡಾ.ರಾಜ್ಕುಮಾರ್ ಅಂದಾಕ್ಷಣ ಅವರ ಸರಳ ವ್ಯಕ್ತಿತ್ವ ಹಾಗೂ ಅವರು ಅಭಿನಯಿಸಿರುವ ಸಿನಿಮಾಗಳು ನೆನಪಾಗುತ್ತದೆ. ನಟನಾಗಿ, ಗಾಯಕನಾಗಿ, ಕನ್ನಡ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ಅಣ್ಣಾವ್ರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ಇದೇ ಹಾದಿಯಲ್ಲಿ ಸಾಗುತ್ತಿದ್ದವರು ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್. ಅಪ್ಪು ಬಗ್ಗೆ ಗೊತ್ತಿರದ ಅನೇಕ ಸಂಗತಿಗಳನ್ನು ಪಾರ್ವತಮ್ಮ ರಾಜ್ಕುಮಾರ್ ಅವರ ಮೂರನೇ ಸಹೋದರ ಎಸ್.ಎ ಶ್ರೀನಿವಾಸ್ ಬಿಚ್ಚಿಟ್ಟಿದ್ದಾರೆ.
ಶ್ರೀನಿವಾಸ್ ಅವರು ಪ್ರೊಡಕ್ಷನ್ ಕೆಲಸಗಳನ್ನು ಮಾಡುವ ಮೂಲಕ ನಿರ್ಮಾಪಕರಾದ್ರು. ತಾಯಿಗೆ ತಕ್ಕ ಮಗ, ಶ್ರೀನಿವಾಸ ಕಲ್ಯಾಣ, ವಸಂತ ಗೀತ, ಎರಡು ಕನಸು, ಹೊಸ ಬೆಳಕು ಹೀಗೆ ಸಾಕಷ್ಟು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ನಾನು ಮದ್ರಾಸ್ನಲ್ಲಿದ್ದಾಗ ಅಪ್ಪು ಹುಟ್ಟಿದ್ದು. ಆಗ ಅವನನ್ನು ಎತ್ತಿ ಆಡಿಸಿದ್ದೇ ಎಂದು ನೆನೆಪಿಸಿಕೊಂಡಿದ್ದಾರೆ.
ಮದ್ರಾಸ್ನಿಂದ ರಾಜ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಯಿತು. ಆ ಸಮಯದಲ್ಲಿ ಚಿಕ್ಕವನಾಗಿದ್ದ ಅಪ್ಪುನನ್ನು ಸೈಕಲ್ನಲ್ಲಿ ಸ್ಕೂಲ್ಗೆ ಕರೆದುಕೊಂಡು ಹೋಗ್ತಾ ಇದ್ದೆ. ಬಾಲ್ಯದಲ್ಲೇ ಸಖತ್ ಆಕ್ಟೀವ್ ಆಗಿದ್ದ ಅಪ್ಪು ಸದಾ ನಗು ಮುಖದ ರಾಜಕುಮಾರ ಅಂದಿದ್ದಾರೆ.
ಅಪ್ಪು ಚಿಕ್ಕವಯಸ್ಸಿನಲ್ಲೇ ಹೈಪರ್ ಆಕ್ಟೀವ್ ಅನ್ನೋದಿಕ್ಕೆ ಎಸ್.ಎ ಶ್ರೀನಿವಾಸ್ ಒಂದು ಘಟನೆಯನ್ನ ಹೇಳಿದ್ದಾರೆ. ಹೈದರಾಬಾದ್ನ ವಾಹಿನಿ ಸ್ಟುಡಿಯೋದಲ್ಲಿ ಒಂದು ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿತ್ತು. ಪಕ್ಕದಲ್ಲೇ ಬಾಲಿವುಡ್ ನಟ ಸಂಜೀವ್ ಕುಮಾರ್ ಸಿನಿಮಾ ಕೂಡ ಚಿತ್ರೀಕರಣ ನಡೆಯುತ್ತಿತ್ತು. ಬ್ರೇಕ್ ವೇಳೆ ನಟ ಸಂಜೀವ್ ಕುಮಾರ್ ಬಂದು ರಾಜ್ ಕುಮಾರ್ ಹತ್ತಿರ ಮಾತನಾಡುತ್ತಿದ್ದರು.
ಆ ಸಮಯದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಮಗ ಪುನೀತ್ನನ್ನು ಕರೆದುಕೊಂಡು ಬಂದ್ರಂತೆ. ಆಗ ಅಣ್ಣಾವ್ರು ಸಂಜೀವ್ ಕುಮಾರ್ಗೆ ಇವನು ನನ್ನ ಚಿಕ್ಕ ಮಗ ಅಂತಾ ಅಂದ್ರಂತೆ. ಆಗ ಸಂಜೀವ್ ಕುಮಾರ್, ನಾನು ಬಾಲಿವುಡ್ನಲ್ಲಿ ಬಡಾ ಆರ್ಟಿಸ್ಟ್ ಅಂತಾ ಹೇಳಿಕೊಂಡ್ರಂತೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಅಪ್ಪು, 'ರೀ ನೀವು ನನಗೆ ಬೇಡ, ನನಗೆ ಅಮಿತಾಬ್ ಬಚ್ಚನ್ ಇಷ್ಟ ರೀ' ಅಂದ್ರಂತೆ.