ನಿರ್ದೇಶನದ ಜೊತೆಗೆ ಹೀರೋ ಆಗುವ ಸಂಸ್ಕೃತಿ ಕನ್ನಡ ಚಿತ್ರರಂಗದಲ್ಲಿದೆ. ಈ ಸಾಲಿನಲ್ಲಿ ನಿರ್ದೇಶಕರಾಗಿ ಬಳಿಕ , ನಾಯಕ ನಟನಾಗಿ ಯಶಸ್ಸು ಕಂಡವರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಒಬ್ಬರು. ತರ್ಲೆ ನನ್ಮಗ, ಶ್, ಓಂ, ಉಪೇಂದ್ರ, ಎ, ಸೂಪರ್, ಉಪ್ಪಿ 2 ಅಂತಹ ಯಶಸ್ಸಿ ಚಿತ್ರಗಳನ್ನ ಮಾಡಿರುವ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ. ಸದ್ಯ ಕೊರೊನಾ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಕಾರ್ಮಿಕರು, ರೈತರಿಗೆ ಸಹಾಯ ಮಾಡಿದ್ದಾರೆ.
ನಿರ್ದೇಶಕ ಕೆ.ಮಾದೇಶ್ ನಿರ್ದೇಶನದ ಲಗಾಮ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಉಪೇಂದ್ರ, ಸದ್ಯ ನಾನು ಲಗಾಮ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೇನೆ. ಜು.20ರ ನಂತರ ಆರ್.ಚಂದ್ರು ಅವರ ನಿರ್ದೇಶನದ ಕಬ್ಜ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಇದಕ್ಕಾಗಿ ಸೆಟ್‌ಗಳು ಸಿದ್ಧವಾಗುತ್ತಿದೆ. ಆದಷ್ಟು ಬೇಗ ನಾನು ಡೈರೆಕ್ಷನ್ ಮಾಡ್ತೀನಿ. ಶೀಘ್ರದಲ್ಲೇ ಇದರ ವಿಶೇಷ ವಿಡಿಯೋವನ್ನ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಪ್ರಜಾಕೀಯದ ಬಗ್ಗೆ ಉಪ್ಪಿ ಮಾತು:
ಪ್ರಜಾಕೀಯ ಪಕ್ಷದ ಮುಂದಿನ ನಡೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಪೇಂದ್ರ, ನಾನು ಒಬ್ಬ ಸಂಸ್ಥಾಪಕ ಅಧ್ಯಕ್ಷನಾಗಿ, ಕಾರ್ಮಿಕನಾಗಿ ಕೆಲಸ ಮಾಡುತ್ತೇನೆ. ಪ್ರಜಾಕೀಯ ಮತದಾರರ ಪಕ್ಷ. ಇಲ್ಲಿ ಯಾರನ್ನೂ ನಂಬುವುದು ಬೇಡ. ನಿಮ್ಮನ್ನು ನೀವು ನಂಬಿ, ನಾನು ಬದಲಾವಣೆ ತರಬಲ್ಲೆ ಎಂದು ನಂಬಿದರೆ ಅದುವೇ ನಿಜವಾದ ಬದಲಾವಣೆ. ಪ್ರಜಾಕೀಯ ಪಕ್ಷದಿಂದ ಚುನಾವಣೆಗೆ ನಿಂತು ಅವರು ಸರಿಯಾಗಿ ಕೆಲಸ ಮಾಡದೇ ಇದ್ದರೆ ಅವರನ್ನು ಕೆಳಗಿಳಿಸಲು ಜನರ ಜೊತೆಗೆ ನಾನೂ ಇರುತ್ತೇನೆ. ಇಂತಹ ಬದಲಾವಣೆ ಆದರೆ ಅದುವೇ ನಿಜವಾದ ಪ್ರಜಾಪ್ರಭುತ್ವ. ಜನರು ಆಯ್ಕೆ ಮಾಡಿದ ಅಭ್ಯರ್ಥಿ ಸರಿಯಾಗಿ ಕೆಲಸ ಮಾಡದೇ ಇದ್ದರೆ ಆತನನ್ನು ಅನರ್ಹಗೊಳಿಸುವ ಅಧಿಕಾರವನ್ನು ಜನರ ಕೈಗೆ ನೀಡುವ ಕಾನೂನು ಬರಬೇಕು ಎಂದರು.
ಇನ್ನು ಲಾಕ್‌ಡೌನ್ ಸಂದರ್ಭದಲ್ಲಿ ಹಲವು ಕಥೆಗಳನ್ನು ಮಾಡಿದ್ದೇನೆ. ಎಲ್ಲರಿಗೂ ಈ ಕಥೆ ಥ್ರಿಲ್ ಆಗುತ್ತೆ. ಸದ್ಯದಲೇ ನನ್ನ ನಿರ್ದೇಶನದ ಹೊಸ ಸಿನಿಮಾ ಅನೌನ್ಸ್ ಮಾಡುವುದಾಗಿ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ತಂದಿದೆ.