ಮೊಟ್ಟ ಮೊದಲ ಬಾರಿಗೆ ಪವರ್‌ಸ್ಟಾರ್ ಪುನೀತ್ ರಾಜ್ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರವೊಂದು ಸದ್ದಿಲ್ಲದೆ ತೆರೆಗೆ ಬರಲು ಸಜ್ಜಾಗಿದೆ.
ಪರ್ಸಾ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಲಕ್ಕಿಮ್ಯಾನ್' ಸಿನಿಮಾದಲ್ಲಿ ಪುನೀತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಾಧು ಕೋಕಿಲ ಸ್ಟುಡಿಯೋದಲ್ಲಿ ಡಬ್ಬಿಂಗ್ ಕೆಲಸ ನಡೆಯುತ್ತಿದೆ.
ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ಪುನೀತ್ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆಯಂತೆ. ವಿಶೇಷವಾಗಿ, ಅಪ್ಪು ಹಾಗೂ ಬಹುಭಾಷಾ ನಟ ಪ್ರಭುದೇವ ಇಬ್ಬರೂ ಡಾ.ರಾಜ್ ಮೇಲೆ ರಚಿಸಲಾದ ಹಾಡೊಂದರಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಇಬ್ಬರೂ ನಟರು ತೆರೆ ಹಂಚಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯರಾಗಿ ಸಂಗೀತ ಶೃಂಗೇರಿ ಹಾಗೂ ರೋಶನಿ ಪ್ರಕಾಶ್ ಅಭಿನಯಿಸಿದ್ದಾರೆ. ಉಳಿದಂತೆ ಆರ್ಯ, ರಂಗಾಯಣ ರಘು, ಸಾಧುಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.
ಪಿ.ಆರ್.ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್ ಅವರ ನಿರ್ಮಿಸಿದ್ದು, ಎಸ್.ನಾಗೇಂದ್ರ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೀವಾ ಶಂಕರ್ ಅವರ ಛಾಯಾಗ್ರಹಣವಿದ್ದು, ಹಾಡುಗಳಿಗೆ ವಿಜಯ್ ಮತ್ತು ವಿಕ್ಕಿ ಸಂಗೀತ ಸಂಯೋಜನೆ ಮಾಡಿದ್ದು, ಧನಂಜಯ ರಂಜನ್ ಸಾಹಿತ್ಯ ರಚಿಸಿದ್ದಾರೆ.
ಪ್ರಭುದೇವ, ನಾಗೇಂದ್ರ, ಪುನೀತ್ ಕಾರ್ತಿಕೇಯನ್ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ವರ್ಕ್ ಮಾಡಿದ್ದಾರೆ. ಬಾಲಾಜಿ ಅವರ ಸಂಕಲನ, ಅಶ್ವಥ್ ಮಾರಿಮುತ್ತು ಅವರ ಕಥೆ, ಮಂಜು ಮಾಂಡವ್ಯ, ಸಂಪತ್ ಸಿರಿಮನೆ ಹಾಗೂ ರಘುನಂದನ್ ಕಾನಡ್ಕ(ಪುನೀತ್ ಪಾತ್ರಕ್ಕೆ) ಅವರ ಸಂಭಾಷಣೆ, ಶೃಂಗೇರಿ ಸುರೇಶ್ ಅವರ ಸಹನಿರ್ದೇಶನವಿದೆ. ಮೋಹನ್ ಬಿ.ಕೆ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ. ಬರುವ ಡಿಸೆಂಬರ್ ಅಥವಾ ಜನವರಿ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಜನೆ ಲಕ್ಕಿಮ್ಯಾನ್ ಚಿತ್ರತಂಡಕ್ಕಿದೆ.