ಕೊಪ್ಪಳ:ತೃತೀಯ ಲಿಂಗಿಯೊಬ್ಬರು ನಾಯಕಿಯಾಗಿ ನಟಿಸಿರುವ ಸಿನಿಮಾವೊಂದು ಸ್ಯಾಂಡಲ್ವುಡ್ನಲ್ಲಿ ತಯಾರಾಗಿ ಬಿಡುಗಡೆಗೂ ಸಜ್ಜಾಗಿದೆ. ಹೈದರಾಬಾದ್-ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ಹೊಸ ಪ್ರತಿಭೆಗಳೇ ಸೇರಿಕೊಂಡು ನಿರ್ಮಿಸಿರುವ 'ಮೂರನೇ ಕಣ್ಣು' ಎಂಬ ಚಿತ್ರದ ಮೊದಲ ಟೀಸರ್ ಕೂಡಾ ಬಿಡುಗಡೆಯಾಗಿದ್ದು ಮೇಕಿಂಗ್ ನೋಡಿದರೆ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ.
ಜಿಲ್ಲೆಯ ಭಾಗ್ಯನಗರ ಪಟ್ಟಣದ ನಿವಾಸಿ ಕೆ.ಎನ್. ನಜೀರ್ ಎಂಬುವವರು ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವುದು ಓರ್ವ ತೃತೀಯಲಿಂಗಿ (ಮಂಗಳಮುಖಿ) ಎನ್ನುವುದು ವಿಶೇಷ. ಶ್ರೇಯ ಎಂಬ ಮಂಗಳಮುಖಿ ಮುಖ್ಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಎಂಬುವವರು ಈ ಚಿತ್ರದ ನಾಯಕ. ರೋಷ್ನಿ ಹಾಗೂ ಅಂಜಲಿ ಎಂಬ ಮತ್ತಿಬ್ಬರು ಮಂಗಳಮುಖಿಯರು ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಸುತ್ತಮುತ್ತ ಹಾಗೂ ಕೆಲವೊಂದಿಷ್ಟು ಸೀನ್ಗಳನ್ನು ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಂಗಳಮುಖಿಯರ ಬದುಕಿನ ಸುತ್ತ ಸುತ್ತುವ ಈ ಚಿತ್ರದ ಕಥೆ ಸಮಾಜಕ್ಕೆ ಒಂದು ಸಂದೇಶ ನೀಡಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಕೆ.ಎನ್. ನಜೀರ್.