ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪಾಲಿಗೆ ಇಂದು ಮಹತ್ತರವಾದ ದಿನ. 2008ರಲ್ಲಿ ಬಿಡುಗಡೆಯಾಗಿ ಜನಮನಗೆದ್ದ ಮೊಗ್ಗಿನ ಮನಸ್ಸು ಸಿನಿಮಾಗೆ ಇಂದು 12 ವರ್ಷಗಳ ಸಂಭ್ರಮ. ನಂದಗೋಕುಲ ಧಾರಾವಾಹಿಯಲ್ಲಿ ಅಣ್ಣ -ತಂಗಿಯಾಗಿ ನಟಿಸಿದ್ದ ಯಶ್ ಹಾಗೂ ರಾಧಿಕಾ ಈ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.
ಯಶ್ ನಾಯಕ ನಟನಾಗಿ,ರಾಧಿಕಾ ಪಂಡಿತ್ ನಾಯಕಿಯಾಗಿ ಅಭಿನಯಿಸಿದ್ದರು. ಮೊಗ್ಗಿನ ಮನಸ್ಸು ಚಿತ್ರ ಇವರಿಬ್ಬರ ಸಿನಿ ಜೀವನಕ್ಕೆ ಬ್ರೇಕ್ ನೀಡಿದ ಸಿನಿಮಾ ಎಂದರೆ ತಪ್ಪಾಗಲಾರದು.
ಮೊಗ್ಗಿನ ಮನಸ್ಸು ಸಿನಿಮಾ ಹದಿಹರೆಯದ ತಲ್ಲಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಹದಿಹರೆಯದ ಪ್ರೇಮ, ಗೆಳೆತನ ಅದರಿಂದಾಗುವ ಪರಿಣಾಮಗಳನ್ನು ಒಳಗೊಂಡಿದ್ದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿತ್ತು. ಪ್ರೇಕ್ಷಕರ ಜೊತೆಗೆ ಸಿನಿಮಾ ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿಕೊಂಡ ಈ ಸಿನಿಮಾ ತೆಲುಗಿಗೂ ರಿಮೇಕ್ ಆಯಿತು.
ಶಶಾಂಕ್ ನಿರ್ದೇಶನದ ಈ ಚಿತ್ರದ ನಟನೆಗೆ ರಾಧಿಕಾ ಪಂಡಿತ್ ಚೊಚ್ಚಲ ರಾಜ್ಯ ಪ್ರಶಸ್ತಿ ಗಳಿಸಿದರು. ಉಳಿದಂತೆ ಸಂಗೀತಾ ಶೆಟ್ಟಿ, ಶುಭಾ ಪೂಂಜ, ಮಾನಸಿ, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಮನೋಮೂರ್ತಿ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡುಗಳು ಇಂದಿಗೂ ಅಚ್ಚಳಿಯದೆ ಮನದಲ್ಲಿ ಉಳಿದಿವೆ.