ಬೆಂಗಳೂರು: ರವಿ ಶ್ರೀವತ್ಸ ನಿರ್ದೇಶಿಸಬೇಕಿದ್ದ ಎಂಆರ್ ಚಿತ್ರವನ್ನು ನಿಲ್ಲಿಸುವಲ್ಲಿ ನಿರ್ಮಾಪಕ ಮತ್ತು ಮುತ್ತಪ್ಪ ರೈ ಆಪ್ತ ಪದ್ಮನಾಭ ಗೌಡ ಕೊನೆಗೂ ಯಶಸ್ವಿಯಾಗಿದ್ದಾರೆ. ಎಂಆರ್ ಚಿತ್ರದ ಸಂಬಂಧ ಸುದ್ದಿಗೋಷ್ಠಿ ಕರೆದಿದ್ದ ರವಿ ಶ್ರೀವತ್ಸ, ತಾವು ಚಿತ್ರವನ್ನು ನಿಲ್ಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪದ್ಮನಾಭ ಗೌಡ ಮುತ್ತಪ್ಪ ರೈ ಕುರಿತು ಚಿತ್ರ ಮಾಡಿದ ನಂತರ, ತಾವು ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ.
ಮುತ್ತಪ್ಪ ರೈ ಜೀವನಾಧಾರಿತ 'ಎಂಆರ್' ಸದ್ಯಕ್ಕೆ ಸ್ಟಾಪ್; ಪದ್ಮನಾಭ ಗೌಡ ನಡೆ ಏನು..? - Muthappa Rai is a life cinema
ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾ ಯಾರು ನಿರ್ಮಿಸುತ್ತಾರೆ, ನಿರ್ದೇಶಿಸುತ್ತಾರೆ ಎಂಬುದಕ್ಕೆ ಕೆಲ ದಿನಗಳಲ್ಲಿ ಉತ್ತರ ಸಿಗಲಿದೆ. ರವಿ ಶ್ರೀವತ್ಸ ಎಂಆರ್ ಸಿನಿಮಾವನ್ನು ಸದ್ಯಕ್ಕೆ ಕೈ ಬಿಟ್ಟಿದ್ದು, ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ರವಿ ಶ್ರೀವತ್ಸ ನಿರ್ದೇಶಿಸಬೇಕಿದ್ದ ಚಿತ್ರವೇನೋ ನಿಂತಿತು, ಪದ್ಮನಾಭ ಗೌಡ ನಿರ್ಮಾಣದ ಚಿತ್ರ ಯಾವಾಗ ಶುರುವಾಗುತ್ತದೆ ಎಂಬ ಪ್ರಶ್ನೆ ಸಹಜ. ಏಕೆಂದರೆ, ಪದ್ಮನಾಭ ಗೌಡ ಹಾದಿ ಇದೀಗ ಸುಗಮವಾಗಿದ್ದು, ಅವರು ಯಾವಾಗ ಬೇಕಾದರೂ ಚಿತ್ರ ಶುರು ಮಾಡಬಹುದಾಗಿದೆ. ಮೊದಲು ಚಿತ್ರ ನಿಲ್ಲಲಿ ಆ ನಂತರ ಮುಂದಿನ ವರ್ಷ ತಾವು ಚಿತ್ರ ಶುರು ಮಾಡುವುದಾಗಿ ಪದ್ಮನಾಭ ಗೌಡ ಹೇಳಿಕೊಂಡಿದ್ದರು. ಅದರಂತೆ ಮುಂದಿನ ಐದಾರು ತಿಂಗಳುಗಳಲ್ಲಿ ಈ ಚಿತ್ರ ಶುರುವಾಗುವ ಸಾಧ್ಯತೆ ಇದೆ.
ಆದರೆ, ಈ ಚಿತ್ರದಲ್ಲಿ ಮುತ್ತಪ್ಪ ರೈ ಆಗಿ ಯಾರು ನಟಿಸುತ್ತಾರೆ, ಚಿತ್ರ ನಿರ್ದೇಶಿಸುವುದು ಯಾರು, ಕಥೆ ಯಾರದ್ದು ಎಂಬ ಪ್ರಶ್ನೆಗಳಿಗೆ ಪದ್ಮನಾಭ ಇದುವರೆಗೂ ಉತ್ತರ ಕೊಟ್ಟಿಲ್ಲ. ಅಷ್ಟೇ ಅಲ್ಲ, ರವಿ ಶ್ರೀವತ್ಸ ಮೊದಲು ಕಥೆ ಹೇಳಲಿ, ಅದು ಚೆನ್ನಾಗಿದ್ದರೆ ಅವರ ಜೊತೆಗೆ ಚಿತ್ರ ಮಾಡುವ ಸಾಧ್ಯತೆ ಇದೆ ಎಂದು ಸಹ ಪದ್ಮನಾಭ ಹೇಳಿಕೊಂಡಿದ್ದರು. ರವಿ ಶ್ರೀವತ್ಸ ಇದೀಗ ಚಿತ್ರ ನಿಲ್ಲಿಸಿರುವುದರಿಂದ ಅವರನ್ನೇ ಕರೆಸಿ ಅವರಿಂದಲೇ ಚಿತ್ರ ಮಾಡಿಸುತ್ತಾರಾ ಅಥವಾ ಬೇರೆ ತಂಡ ಇಟ್ಟುಕೊಂಡು ಇನ್ನೊಂದು ಚಿತ್ರ ಮಾಡುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ನಿಟ್ಟಿನಲ್ಲಿ ಪದ್ಮನಾಭ ಏನು ಮಾಡುತ್ತಾರೋ ನೋಡಬೇಕಿದೆ.