ಗಾಂಧಿನಗರದ ಸುತ್ತಮುತ್ತ ಇದ್ದ ಪ್ರಭಾತ್, ಸಾಗರ್, ಅಲಂಕಾರ್, ಗೀತಾ, ಮೆಜೆಸ್ಟಿಕ್, ತ್ರಿಭುವನ್, ಕೈಲಾಶ್, ಕೆಂಪೇಗೌಡ, ಕಲ್ಪನಾ, ಹಿಮಾಲಯ, ಕಪಾಲಿ ಸೇರಿದಂತೆ ಸಾಲು ಸಾಲು ಚಿತ್ರಮಂದಿರಗಳು ಕಾಣೆಯಾಗಿವೆ. ಉಳಿದಿರುವ ಚಿತ್ರಮಂದಿರಗಳು ಸದ್ಯದಲ್ಲೇ ನೆಲಸಮ ಆಗಲಿವೆ ಎನ್ನಲಾಗುತ್ತಿದೆ. ಸಂತೋಷ್, ನರ್ತಕಿ, ಸಪ್ನ, ಅಭಿನಯ್, ಅನುಪಮ, ತ್ರಿವೇಣಿ, ಭೂಮಿಕಾ, ಮೂವಿಲ್ಯಾಂಡ್, ಮೇನಕಾ ಚಿತ್ರಮಂದಿರಗಳ ಸ್ಥಿತಿ ಸರಿಯಿಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಸಾಗರ್ ತ್ರಿಭುವನ್, ಕೈಲಾಶ್ ಥಿಯೇಟರ್ಗಳನ್ನು ಕೆಡವಿ ಅಲ್ಲಿ ಮಳಿಗೆಗಳನ್ನು ಕಟ್ಟಲಾಯಿತು. ಇದಕ್ಕೂ ಮೊದಲೇ ಪ್ರಭಾತ್, ಅಲಂಕಾರ್, ಕಲ್ಪನಾ, ಕೆಂಪೇಗೌಡ, ಹಿಮಾಲಯ, ಗೀತಾ ಚಿತ್ರಮಂದಿರಗಳು ಕೂಡಾ ಮಳಿಗೆಗಳ ಪಾಲಾಗಿತ್ತು. ಇನ್ನು ಮೆಜೆಸ್ಟಿಕ್ ಹಾಗೂ ಕಪಾಲಿ ಥಿಯೇಟರ್ ಸ್ಥಳದಲ್ಲಿ ಏನು ಬರುತ್ತದೆ ಎಂದು ಗೊತ್ತಿಲ್ಲ.
ಇದರೊಂದಿಗೆ ಗಾಂಧಿನಗರದಲ್ಲಿ ಇರುವ ನಿರ್ಮಾಪಕ, ವಿತರಕರ ಕಚೇರಿಗಳು ಕೂಡಾ ಅಲ್ಲಿಂದ ಕಾಣೆಯಾಗಿವೆ. ವಜ್ರೆಶ್ವರಿ ಕಂಬೈನ್ಸ್ ಕೂಡಾ ವ್ಯಾಪಾರ ಮಳಿಗೆ ಆಗಿ ಬದಲಾಗಿದೆ. ರಾಮು, ವಿ.ರವಿಚಂದ್ರನ್, ಶೈಲೇಂದ್ರ ಬಾಬು ಕಚೇರಿಗಳು ಕೂಡಾ ಈಗ ಇಲ್ಲ. ಇದೀಗ ಬಹುತೇಕ ಸಿನಿಮಾ ಚಟುವಟಿಕೆಗಳು ನಾಗರಬಾವಿ, ಚಂದ್ರಾ ಲೇಔಟ್ ಹಾಗೂ ರಾಜರಾಜೇಶ್ವರಿ ನಗರಕ್ಕೆ ಶಿಫ್ಟ್ ಆಗಿವೆ.
ನಾಗರಬಾವಿಯೇ ಈಗ ಮಿನಿ ಗಾಂಧಿನಗರ ಎಂದು ಹೇಳಲಾಗುತ್ತಿದೆ. ಜಯಣ್ಣ-ಭೋಗೇಂದ್ರ, ಪುಷ್ಕರ್ ಫಿಲ್ಮ್ಸ್, ರಕ್ಷಿತ್ ಶೆಟ್ಟಿ ಕಚೇರಿ, ಎಸ್. ಕೃಷ್ಣ ಕಚೇರಿ, 8 ಎಕರೆ ಜಾಗದಲ್ಲಿ ಕಲರ್ಸ್ ಕನ್ನಡ ವಾಹಿನಿ, ನಿರ್ಮಾಪಕ ಸೋಮಶೇಖರ್, ಸಾಧು ಕೋಕಿಲ ಅವರ 4 ಅಂತಸ್ತಿನ ರೆಕಾರ್ಡಿಂಗ್ ಸ್ಟುಡಿಯೋ, ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ, ವಿತರಕ ಮಹೇಶ್ ಕೊಠಾರಿ ಅವರ ಸ್ಟುಡಿಯೋ ನಾಗರಭಾವಿಯಲ್ಲಿದೆ.