ಕೊರೊನಾ ಸಂದರ್ಭದಲ್ಲಿ ಕನ್ನಡ ವಾಹಿನಿ ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡಲು ಆರಂಭಿಸಿದವು. ಅದರಲ್ಲಿ “ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್” ಧಾರಾವಾಹಿ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ಡಬ್ಬಿಂಗ್ ಧಾರಾವಾಹಿಗಳಲ್ಲಿ ಜನಮನ ಸೂರೆಗೊಂಡ ನಂಬರ್ ಒನ್ ಧಾರಾವಾಹಿಯಾಗಿ ದಾಖಲೆ ನಿರ್ಮಿಸಿದೆ. ಕನ್ನಡ ಕಿರುತೆರೆಯಲ್ಲಿಯೇ ಅಭೂತಪೂರ್ವ ಯಶಸ್ಸು ಗಳಿಸಿದ “ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್” ಭಾನುವಾರ ನವೆಂಬರ್ 22ರಂದು ಮಹಾ ಸಂಚಿಕೆಯಾಗಿ ಸಂಜೆ 5:30ರಿಂದ 7:30ರವರೆಗೆ ಪ್ರಸಾರವಾಗಲಿದೆ.
ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಬಾಲ್ಯದಿಂದಲೇ ಅಸ್ಪೃಶ್ಯತೆಯ ಸಂಕಷ್ಟ ಎದುರಿಸಿದರೂ ಕಂಗೆಡದೆ ತಮ್ಮ ವಿದ್ಯಾಭ್ಯಾಸ ಪೂರೈಸಿ ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸುವ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕನಾಗಿ ಬೆಳೆಯುತ್ತಾರೆ.
ಈ ಧಾರಾವಾಹಿಯನ್ನು ಜನರು ಒಟ್ಟಾಗಿ ಕೂತು ಎಲ್.ಇ.ಡಿ. ಸ್ಕ್ರೀನ್ ಗಳಲ್ಲಿ ವೀಕ್ಷಿಸುತ್ತಿದ್ದಾರೆ. ಬಾಲಕ ಅಂಬೇಡ್ಕರ್ ಪಾತ್ರದಲ್ಲಿ ನಟಿಸಿದ ಆಯುಧ್ ಭಾನುಶಾಲಿ ಕನ್ನಡಿಗರ ಮನೆ ಮನ ಗೆದ್ದಿದ್ದಾರೆ. ಈ ಧಾರಾವಾಹಿಯ ಶೀರ್ಷಿಕೆ ಗೀತೆ ಒಂದೇ ತಿಂಗಳಲ್ಲಿ 17 ಲಕ್ಷ ವೀಕ್ಷಣೆ ಕಂಡಿದೆ. ಈ ಧಾರಾವಾಹಿಯ ಮೇಕಿಂಗ್ ವಿಡಿಯೋ ಕೂಡಾ ವೈರಲ್ ಆಗಿದೆ.
ವೀಕ್ಷಕರ ಒತ್ತಾಯದ ಮೇರೆಗೆ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿಯ ಶೀರ್ಷಿಕೆ ಗೀತೆಯ ಕಾಲರ್ ಟ್ಯೂನ್ ಅನ್ನು ಬಿಡುಗಡೆ ಮಾಡಲಾಗಿದೆ.
ಧಾರಾವಾಹಿಯ ಪೋಸ್ಟರ್ ಗಳು ಮಾರುಕಟ್ಟೆಗೆ ಬಂದಿವೆ. ಡಾ.ಅಂಬೇಡ್ಕರ್ ಅವರ ಕುರಿತಾದ ಪತ್ರಿಕಾ ಲೇಖನಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗುತ್ತಿವೆ.
ಸಾಮಾನ್ಯವಾಗಿ ಧಾರಾವಾಹಿಗಳು ಮಹಿಳೆಯರು ಹಾಗೂ ವೃದ್ಧರನ್ನು ಸೆಳೆಯುತ್ತವೆ. ಆದರೆ, ವಯಸ್ಸಿನ ಮಿತಿಗಳಿಲ್ಲದೇ ಮಕ್ಕಳು, ಯುವಜನರು, ಗೃಹಿಣಿಯರು ಹಾಗೂ ನಿವೃತ್ತರನ್ನು ಒಂದೇ ಆಕರ್ಷಣೆ ಪಡೆದಿರುವ ಧಾರಾವಾಹಿ ಇದಾಗಿದೆ.