ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರ 14 ದಿನಗಳ ಲಾಕ್ಡೌನ್ ಘೋಷಣೆ ಮಾಡಿದೆ. ಮೇ 10ರಿಂದ ಲಾಕ್ಡೌನ್ ನಿಯಮ ಜಾರಿಗೆ ಬರಲಿದ್ದು, ಈ ಹಿನ್ನೆಲೆ ರಿಯಾಲಿಟಿ ಶೋಗಳು, ಧಾರಾವಾಹಿಗಳ ಚಿತ್ರೀಕರಣ ಸ್ಥಗಿತವಾಗಿದೆ.
ಈ ಕುರಿತು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಪ್ರಕಟಣೆ ಹೊರಡಿಸಿದ್ದು, ಕೊರೊನಾ ಹಾವಳಿ ಹೆಚ್ಚಳದಿಂದಾಗಿ ಎಲ್ಲ ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಒಮ್ಮತದಿಂದ ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಎಲ್ಲಾ ಧಾರಾವಾಹಿ, ರಿಯಾಲಿಟಿ ಶೋ ಚಿತ್ರೀಕರಣ ಬಂದ್ ಒಂದು ವೇಳೆ ಯಾರಾದರು ಕದ್ದು - ಮುಚ್ಚಿ ಚಿತ್ರೀಕರಣ ಮಾಡುತ್ತಿರುವುದು ತಿಳಿದು ಬಂದಲ್ಲಿ, ಕೋವಿಡ್ ನಿಯಮ ಉಲ್ಲಂಘನೆ ಅಡಿ, ಆ ಧಾರಾವಾಹಿಯ ತಂಡ ಮತ್ತು ವಾಹಿನಿಗಳು ಸರ್ಕಾರದ ಕೋವಿಡ್ ನಿಯಮಾವಳಿಗಳ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳು ಒಳಾಂಗಣ ಶೂಟಿಂಗ್ ಮಾಡುತ್ತಿವೆ. ಇದಕ್ಕೆ ಏನಾದರೂ ನಿರ್ಬಂಧ ಇದೆಯೇ ಎನ್ನುವ ಪ್ರಶ್ನೆಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಕೇಳಲಾಗಿತ್ತು. ಈ ಬಗ್ಗೆ ಉತ್ತರಿಸಿದ ಅವರು, ಈ ಬಾರಿ ಒಳಾಂಗಣ ಶೂಟಿಂಗ್ಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೇ 24ರ ಬಳಿಕ ಅಂದಿನ ಸ್ಥಿತಿಗತಿಗಳನ್ನು ಅವಲೋಕಿಸಿ, ಚಿತ್ರೀಕರಣ ಪುನಾರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಇನ್ನು ಸೀರಿಯಲ್ ಹಾಗೂ ರಿಯಾಲಿಟಿ ಶೋಗಳು ಮೇ 24ರ ವರೆಗೂ ಚಿತ್ರೀಕರಣ ಆಗದ ಹಿನ್ನೆಲೆ ಮರು ಪ್ರಸಾರವಾಗಲಿದೆ.