ಸ್ಯಾಂಡಲ್ವುಡ್ನಲ್ಲಿ ಚಿತ್ರದ ಶೀರ್ಷಿಕೆಯಿಂದಲೇ ಸಿಕ್ಕಾಪಟ್ಟೇ ಸದ್ದು ಮಾಡ್ತಿರೋ ಸಿನಿಮಾ ಏಕ್ ಲವ್ ಯಾ.. ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ. ಪತ್ನಿ ರಕ್ಷಿತಾ ಅವರ ಸಹೋದರ, ಹೊಸಪ್ರತಿಭೆ ರಾಣಾ ಈ ಚಿತ್ರದ ನಾಯರಾಗಿದ್ದಾರೆ. ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಸಿನಿಮಾದ 'ಎಣ್ಣೆಗೂ, ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೊ ಭಗವಂತ' ಎಂಬ ಹಾಡನ್ನು ನಿರ್ದೇಶಕ ಪ್ರೇಮ್ ಅನಾವರಣ ಮಾಡಿದ್ದಾರೆ. ಇದೊಂದು ಲವ್ ಬ್ರೇಕಪ್ ಸಾಂಗ್ ಆಗಿದ್ದು, ತೆಲುಗಿನ ಸೆನ್ಸೇಷನಲ್ ಗಾಯಕಿ ಮಂಗ್ಲಿ ಈ ಹಾಡನ್ನ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಏಕ್ ಲವ್ ಯಾ ಸಿನಿಮಾದ ಕಿಕ್ಕೇರಿಸುವ ಎಣ್ಣೆ ಹಾಡು ಬಿಡುಗಡೆ.. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಹಾಡಿಗೆ ಕ್ಯಾಚೀ ಟ್ಯೂನ್ ಹಾಕಿದ್ದಾರೆ. ಗಾಯಕ ಕೈಲಾಶ್ ಕೇರ್ ಸುಮಧುರ ಧ್ವನಿ ಈ ಹಾಡಿಗಿದೆ. ಈ ಎಣ್ಣೆ ಹಾಡನ್ನ ಏಕ್ ಲವ್ ಯಾ ಚಿತ್ರತಂಡ ಹಾಗೂ ನಿರ್ಮಾಪಕಿ ರಕ್ಷಿತಾ ಪ್ರೇಮ್ ಶ್ಯಾಂಪೇನ್ ಓಪನ್ ಮಾಡುವ ಮೂಲಕ ಬಿಡುಗಡೆ ಮಾಡಲಾಯಿತು.
ಸಿನಿಮಾದಲ್ಲಿ ಯುವ ನಟ ರಾಣಾ ಜೊತೆ ರಚಿತಾ ರಾಮ್ ಬೋಲ್ಡ್ ಆಗಿ ಕಾಣಿಸಿದ್ದಾರೆ. ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು, ಎಣ್ಣೆಗೂ, ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೊ ಭಗವಂತ ಅಂತಾ ಸೊಂಟ ಬಳುಕಿಸಿದ್ದಾರೆ. ಅಷ್ಟೇ ಅಲ್ಲ, ಸಿಗರೇಟ್ ಸೇದುವ ಮೂಲಕ ರಚ್ಚು ಸ್ಕ್ರೀನ್ ಮೇಲೆ ಮಿಂಚಿದ್ದಾರೆ.
ಸಿನಿಮಾ ಅಲ್ಲದೇ ರಚಿತಾ ರಾಮ್ ನಿಜ ಜೀವನದಲ್ಲೂ ಲವ್ ಬ್ರೇಕ್ ಆಗಿರೋ ಬಗ್ಗೆ ಒಪ್ಪಿಕೊಂಡರು. ಆ ಸಮಯದಲ್ಲಿ ರಚಿತಾ ರಾಮ್ ಎಣ್ಣೆ ಹೊಡೆಯುವ ಸಾಹಸ ಮಾಡಲಿಲ್ವಂತೆ. ಜೀವನದಲ್ಲಿ ಆಗೋದೆಲ್ಲ ಒಳ್ಳೆಯದಕ್ಕೆ ಅಂತಾರೆ. ನಾನು ಸಿನಿಮಾಕ್ಕಾಗಿ ಲವ್ ಬ್ರೇಕ್ ಆದಾಗ ಎಣ್ಣೆ ಕುಡಿಯುವ ಹಾಗೇ ನಟಿಸಿದ್ದೇನೆ ಅಷ್ಟೇ ಅಂದರು.
ರಚಿತಾ ರಾಮ್ ಎಣ್ಣೆ ಬಾಟಲಿ ಹಿಡಿದು ಸಖತ್ ಸ್ಟೆಪ್ ಹಾಕುತ್ತಿರುವುದು ನೋಡ್ತಾ ಇದ್ದರೆ ಹಿರಿಯ ನಟಿ ಮಾಲಾಶ್ರೀ ಅವರ 'ಒಳಗೆ ಸೇರಿದರೆ ಗುಂಡು' ಹಾಡನ್ನು ನೆನಪಿಸುತ್ತದೆ. ಹಾಗೇ ರಾಣಾ ಜೊತೆ ಯುವ ನಟಿ ರೀಷ್ಮಾ ನಾಣಯ್ಯ ಕೂಡ ನಾಯಕಿಯಾಗಿ ನಟಿಸಿದ್ದಾರೆ.
ನಟ ರಾಣಾ ಕೂಡ ಏಕ್ ಲವ್ ಯಾ ಸಿನಿಮಾ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದು, ಈ ಹಾಡಿನ ಬಗ್ಗೆ ಕೊಂಡಾಡಿದರು. ಜೊತೆಗೆ ಅರ್ಜುನ್ ಜನ್ಯ ಮಾತನಾಡಿ, ಈ ಸಿನಿಮಾದಲ್ಲಿ 7 ಹಾಡುಗಳಿವೆ. ಈಗ 3 ಹಾಡುಗಳು ಮಾತ್ರ ಬಿಡುಗಡೆ ಆಗಿವೆ. ಪ್ರೇಮ್ ಅವರು ಇದ್ದಲ್ಲಿ ಹಾಡುಗಳಿಗೆ ಸಖತ್ ಡಿಮ್ಯಾಂಡ್ ಇರುತ್ತೆ ಅಂತಾ ಹೇಳಿದರು.
ನಿರ್ಮಾಪಕಿ ರಕ್ಷಿತಾ ಪ್ರೇಮ್ ಮಾತನಾಡಿ, ಏಕ್ ಲವ್ ಯಾ ಚಿತ್ರತಂಡ ನನ್ನ ಕುಟುಂಬ ಇದ್ದ ಹಾಗೆ ಅಂತಾ ಹೇಳಿದರು. ಮಹೇಂದ್ರ ಸಿಂಹ ಈ ಸಿನಿಮಾಗೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ನಟಿಯರಾದ ಮೇಘನಾ ಗಾಂವ್ಕರ್, ನಿಶ್ವಿಕಾ ನಾಯ್ಡು, ಸುಕೃತಾ ವಾಗ್ಲೆ, ಅದಿತಿ ಪ್ರಭುದೇವ ಅವರ ಉಪಸ್ಥಿತಿ ಕಾರ್ಯಕ್ರಮ ಮೆರುಗು ಹೆಚ್ಚಿಸಿತು.
ಚಿತ್ರೀಕರಣವನ್ನು ಬಹುತೇಕ ಮುಗಿಸಿರೋ ಏಕ್ ಲವ್ ಯಾ ಚಿತ್ರತಂಡ ಸದ್ಯದಲ್ಲೇ ಟ್ರೈಲರ್ ಬಿಡುಗಡೆ ಮಾಡಲಿದೆ. ಮುಂದಿನ ವರ್ಷ ಜನವರಿಯಲ್ಲಿ ಏಕ್ ಲವ್ ಯಾ ತೆರೆಗೆ ಬರಲಿದೆ.