ಸತ್ಯ ಹೆಗ್ಡೆ, ನಮ್ಮ ಸಿನಿಮಾಗೆ ಇಂತಹ ಛಾಯಾಗ್ರಾಹಕ ಬೇಕು ಎಂದು ಸ್ಯಾಂಡಲ್ವುಡ್ನ ಸಾಕಷ್ಟು ನಿರ್ದೇಶಕರು ಹೇಳುವ ಹೆಸರು. ದುನಿಯಾ ಸಿನಿಮಾದಿಂದ ಸತ್ಯ ಹೆಗಡೆ ಅವರ ದುನಿಯಾವೇ ಬದಲಾಯಿತು. ಇನ್ನೊಂದು ವರ್ಷ ಕಳೆದರೆ ಸತ್ಯ ಸ್ಯಾಂಡಲ್ವುಡ್ಗೆ ಬಂದು 25 ವರ್ಷಗಳು ತುಂಬುತ್ತದೆ. ಅವರ ಛಾಯಾಗ್ರಹಣದ ಸೊಗಸು ಸಿನಿಮಾಗಳಿಗೆ ಕಲಶ ಇಟ್ಟಂತೆ. ಯಾರೊಂದಿಗೂ ಹೆಚ್ಚು ಮಾತನಾಡದ ಸತ್ಯ 25ನೇ ವರ್ಷದ ವೃತ್ತಿ ಜೀವನದಲ್ಲಿ ತಮ್ಮ ರೀತಿ ನೀತಿಗಳನ್ನು ಬದಲಾಯಿಸಿಕೊಳ್ಳಬೇಕು ಅಂತ ನಿರ್ಧರಿಸಿದ್ದಾರೆ.
ಛಾಯಾಗ್ರಾಹಕನಾಗಿ ಎರಡು ದಶಕ ಪೂರೈಸಿರುವ ಸತ್ಯ ಹೆಗ್ಡೆಯಿಂದ ಹೊಸ ನಿರ್ಧಾರ
ಒಂದು ಸಿನಿಮಾದಲ್ಲಿ ನಾಯಕ, ನಾಯಕಿ, ನಿರ್ದೇಶಕ, ನಿರ್ಮಾಪಕ ಹೀಗೆ ಪ್ರತಿ ಪಾತ್ರಕ್ಕೂ ತನ್ನದೇ ಆದ ಮಹತ್ವ ಇರುತ್ತದೆ. ಸಿನಿಮಾ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಎಲ್ಲರ ಶ್ರಮ ಅಗತ್ಯ. ಅದರಲ್ಲಿ ಛಾಯಾಗ್ರಾಹಕ ಕೂಡಾ ಪ್ರಮುಖ ಪಾತ್ರ ವಹಿಸುತ್ತಾರೆ. ಛಾಯಾಗ್ರಾಹಕ ಸತ್ಯ ಹೆಗ್ಡೆ ಈಗ ಸ್ಯಾಂಡಲ್ವುಡ್ನಲ್ಲಿ 25ನೇ ವರ್ಷ ಪೂರೈಸುತ್ತಿದ್ದಾರೆ.
ಇದುವರೆಗೂ ನಾನು ನನ್ನ ಸಂತೋಷಕ್ಕಾಗಿ ದುಡಿಯುತ್ತಿದ್ದೆ. ಇನ್ನುಮುಂದೆ ಜೀವನ ನಿರ್ವಹಣೆಗೆ, ಇಬ್ಬರು ಮಕ್ಕಳು ಹಾಗೂ ಪತ್ನಿಗಾಗಿ ಹಣ ಕೂಡಿಡುವ ಕೆಲಸ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ ಸತ್ಯ. ಅಭಿಷೇಕ್ ಅಂಬರೀಶ್ ನಟಿಸಿರುವ ‘ಅಮರ್’ ಸಿನಿಮಾದ ಪತ್ರಿಕಾಗೋಷ್ಟಿಯಲ್ಲಿ ಸತ್ಯ ಹೆಗ್ಡೆ ಇದನ್ನು ಹೇಳಿಕೊಂಡಿದ್ದಾರೆ. ‘ಬಟರ್ ಫ್ಲೈ’ ಸಿನಿಮಾಗೆ ಎರಡು ಭಾಷೆಗಳಲ್ಲಿ ಇವರೇ ಛಾಯಾಗ್ರಹಣ ಮಾಡಿರುವುದು. ರಮೇಶ್ ಅರವಿಂದ್ ಅವರ ಮುಂದಿನ ಸಿನಿಮಾ ನಿರ್ದೇಶನದ ಬಗ್ಗೆ ಕೂಡಾ ತಯಾರಿ ನಡೆಯುತ್ತಿದೆ. ಆ ಸಿನಿಮಾಕ್ಕೂ ಕೂಡ ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಇರಲಿದೆ.
1995 ರಲ್ಲಿ ಸತ್ಯ ಹೆಗ್ಡೆ ಛಾಯಾಗ್ರಹಣ ತರಬೇತಿ ಮುಗಿಸಿದ್ದರು. ಬಿ.ಸಿ. ಗೌರಿಶಂಕರ್ ಅವರಂತ ದಿಗ್ಗಜರ ಜೊತೆ ಕೂಡಾ ಕೆಲಸ ಮಾಡಿ 2000ರಲ್ಲಿ ಸಹಾಯಕ ಛಾಯಾಗ್ರಾಹಕನಾಗಿ 'ಸ್ಪರ್ಶ' ಸಿನಿಮಾದಿಂದ ಸ್ಯಾಂಡಲ್ವುಡ್ಗೆ ಕಾಲಿಟ್ಟರು. 'ತಾಳಿ ಕಟ್ಟುವ ಶುಭ ವೇಳೆ' ಸಿನಿಮಾದಿಂದ ಸ್ವತಂತ್ರ ಛಾಯಾಗ್ರಾಹಕ ಆದವರು. 2007 ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ‘ದುನಿಯ’ ಚಿತ್ರದಿಂದ ಉನ್ನತ ಮಟ್ಟಕ್ಕೇರಿದ ಸತ್ಯ ಹೆಗ್ಡೆ, ಈ ಪ್ರೀತಿ ಒಂಥರಾ, ಇಂತಿ ನಿನ್ನ ಪ್ರೀತಿಯ, ಅಂಬಾರಿ, ಜಂಗ್ಲಿ, ಮನಸಾರೆ, ಗೋಕುಲ, ಜಾಕಿ, ಸಂಜು ವೆಡ್ಸ್ ಗೀತಾ, ಹುಡುಗರು, ಶಿವ, ಅಣ್ಣಾ ಬಾಂಡ್, ಮೈನಾ, ಗಜಕೇಸರಿ, 6-5=2, ರಾಟೆ, ಆಟಗಾರ, ಕೆಂಡಸಂಪಿಗೆ, ದೊಡ್ಮನೆ ಹುಡುಗ, ಯುಟರ್ನ್, ಮಾಸ್ತಿಗುಡಿ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. 'ಪ್ಯಾರಿಸ್ ಪ್ಯಾರಿಸ್' ತಮಿಳು ಸಿನಿಮಾ ಮೂಲಕ ಇವರ ಖ್ಯಾತಿ ಅಲ್ಲಿಯೂ ಪಸರಿಸಿದೆ.