ನವೆಂಬರ್ ಬಂತು ಅಂದ್ರೆ ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಕಳೆಗಟ್ಟುತ್ತೆ. ತಿಂಗಳು ಪೂರ್ತಿ ನಾಡ ಹಬ್ಬವನ್ನು ರಾಜ್ಯದ ಜನರು ಸಡಗರದಿಂದ ಆಚರಿಸುತ್ತಾರೆ. ಪ್ರತಿ ಶಾಲಾ ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಿಸುತ್ತಾರೆ.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ರಂಜಿಸಿದ ಸೆಂಚುರಿ ಸ್ಟಾರ್ - ಶಿವರಾಜ್ಕುಮಾರ್ ರಾಜ್ಯೋತ್ಸವ ಕಾರ್ಯಕ್ರಮ
ಖಾಸಗಿ ಆಸ್ಪತ್ರೆಯೊಂದು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಭಾಗವಹಿಸಿದ್ದರು. ವೇದಿಕೆ ಮೇಲೆ ಹಾಡು ಹಾಡಿ, ಡ್ಯಾನ್ಸ್ ಮಾಡಿ ನೆರೆದಿದ್ದವರನ್ನು ರಂಜಿಸಿದ್ರು.
ಕನ್ನಡ ರಾಜ್ಯೋತ್ಸವ ಕನ್ನಡಿಗರ ಪಾಲಿಗೆ ಹೆಮ್ಮೆಯ ದಿನ. ಪ್ರತಿ ಬೀದಿಬೀದಿಯಲ್ಲಿ ನಾಡ ಬಾವುಟ ಹಾರಿಸಿ ರಾಜ್ಯೋತ್ಸವ ಆಚರಿಸಲಾಗುತ್ತದೆ. ಅದೇ ರೀತಿ ಸದ್ಯ ಖಾಸಗಿ ಆಸ್ಪತ್ರೆಯೊಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮನ್ನು ಬಹಳ ಅದ್ಧೂರಿಯಾಗಿ ಆಚರಿಸಿದೆ. ಅಲ್ಲದೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸೆಂಚುರಿ ಸ್ಟಾರ್ ಶಿವಣ್ಣ ಅವರನ್ನು ಆಹ್ವಾನಿಸಲಾಗಿತ್ತು. ಶಿವರಾಜ್ಕುಮಾರ್ ಕೂಡಾ ಕಾರ್ಯಕ್ರಮದಲ್ಲಿ ಖುಷಿಯಿಂದ ಭಾಗವಹಿಸಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಶಿವಣ್ಣ ಅಲ್ಲಿ ನೆರೆದಿದ್ದವರನ್ನು ರಂಜಿಸಿದ್ದಾರೆ. ಜೊತೆಗೆ ಅಭಿಮಾನಿಗಳ ಒತ್ತಾಯಕ್ಕೆ 'ಟಗರು' ಸಿನಿಮಾದ ಟೈಟಲ್ ಹಾಡಿಗೆ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದಾರೆ. ಶಿವಣ್ಣನ ಜೊತೆ ಹಾಡು ಹಾಗೂ ಕುಣಿತಕ್ಕೆ ಅಭಿಮಾನಿಗಳು ಚಪ್ಪಾಳೆ, ಶಿಳ್ಳೆ ಹಾಕಿ ಸಂಭ್ರಮಿಸಿದರು.