ಶ್ರೀ ಶೈಲೇಂದ್ರ ಪ್ರೊಡಕ್ಷನ್ಸ್, ಎಲ್.ಜಿ. ಕ್ರಿಯೇಶನ್ಸ್ ಮತ್ತು ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ತಯಾರಾಗಿರುವ 'ಗೋವಿಂದ ಗೋವಿಂದ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕಟ್, ಮ್ಯೂಟ್ ಇಲ್ಲದೆ ಯು ಪ್ರಮಾಣ ಪತ್ರ ನೀಡಿದ್ದು ಸಿನಿಮಾ ತೆರೆ ಕಾಣಲು ಸಜ್ಜಾಗಿದೆ.
ಇದೊಂದು ಸದಭಿರುಚಿಯ ಕೌಟುಂಬಿಕ, ಹಾಸ್ಯಮಯ, ರೋಚಕ ಚಿತ್ರ ಎಂದು ಸೆನ್ಸಾರ್ ಮಂಡಳಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದೆ. ಕಾಮಿಡಿ ಸಿನಿಮಾಗಳನ್ನು ಮಾಡುವುದೆಂದರೆ ಸುಲಭವಾದ ವಿಚಾರವಲ್ಲ, ಅಂತದ್ದರಲ್ಲಿ ಚಿತ್ರಕ್ಕೆ ಯು ಸರ್ಟಿಫಿಕೇಟ್ ದೊರೆತಿರುವುದು ಚಿತ್ರಕ್ಕೆ ದೊರೆತ ಮೊದಲ ಜಯ ಎಂದು ಚಿತ್ರತಂಡ ಸಂತೋಷ ವ್ಯಕ್ತಪಡಿಸಿದೆ. ಚಿತ್ರವನ್ನು ಯಾವುದೇ ಮುಜುಗರ ಇಲ್ಲದೆ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದು ಎಂದು ನಿರ್ಮಾಪಕರಲ್ಲಿ ಒಬ್ಬರಾದ ರವಿ.ಆರ್. ಗರಣಿ ಹೇಳಿದ್ದಾರೆ.
ಮತ್ತೊಬ್ಬ ನಿರ್ಮಾಪಕ ಎಸ್. ಶೈಲೇಂದ್ರ ಬಾಬು ಮಾತನಾಡಿ, ಇದು ನನ್ನ ಮಗನ ಸಿನಿಮಾ ಎಂದು ಹೊಗಳುತ್ತಿಲ್ಲ. ಸಿನಿಮಾ ನಿಜವಾಗಲೂ ಚೆನ್ನಾಗಿದೆ. ಈ ಚಿತ್ರವನ್ನು ತಮಿಳು, ಮಲಯಾಳಂ ಭಾಷೆಗಳಿಗೂ ಡಬ್ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಕನ್ನಡ ವಾಹಿನಿಗಳು ಕೂಡಾ ಸಿನಿಮಾ ನೋಡಿ ದೊಡ್ಡ ಮೊತ್ತಕ್ಕೆ ಚಿತ್ರದ ರೈಟ್ಸ್ ಪಡೆದಿದ್ದಾರೆ. ಒಟಿಟಿ ಪ್ಲಾಟ್ಫಾರ್ಮ್ಗಳಿಂದ ಕೂಡಾ ಬೇಡಿಕೆ ಬಂದಿದೆ. ಆದರೆ ಮೊದಲು ಥಿಯೇಟರ್ನಲ್ಲಿ ರಿಲೀಸ್ ಮಾಡಿ ನಂತರ ಒಟಿಟಿಗೆ ನೀಡಲಾಗುವುದು ಎಂದು ಚಿತ್ರತಂಡ ಹೇಳಿದೆ.
ಚಿತ್ರದಲ್ಲಿ ಸುಮಂತ್ ಶೈಲೇಂದ್ರ, ಭಾವನಾ, ಕವಿತಾಗೌಡ, ರೂಪೇಶ್ ಶೆಟ್ಟಿ, ಅಚ್ಯುತ್‌ಕುಮಾರ್, ಶೋಭರಾಜ್, ವಿ. ಮನೋಹರ್, ಪವನ್, ವಿಜಯ್‌ಚೆಂಡೂರ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರವನ್ನು ತಿಲಕ್ ನಿರ್ದೇಶಿಸಿದ್ದು ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಸಿ. ರವಿಚಂದ್ರನ್ ಸಂಕಲನ, ಹಿತನ್ ಹಾಸನ್ ಸಂಗೀತ, ದೇವ್ ರಂಗಭೂಮಿ ಸಂಭಾಷಣೆ, ಡಾ. ಥ್ರಿಲ್ಲರ್ ಮಂಜು ಸಾಹಸ ಇದೆ. ಜನಾರ್ಧನ್ ರಾಮ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
ವಿಜಯಪುರ, ಮಧುಗಿರಿ, ಚಿಂತಾಮಣಿ, ಬೆಂಗಳೂರು ಹಾಗೂ ಇನ್ನಿತರ ಸುಂದರ ತಾಣಗಳಲ್ಲಿ ಸುಮಾರು 60ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಶೀಘ್ರದಲ್ಲೇ ಪ್ರಮೋಷನ್ ಕೆಲಸಗಳನ್ನು ಆರಂಭಿಸಿ ಥಿಯೇಟರ್ ತೆರೆದ ಕೂಡಲೇ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು 6 ಹಾಡುಗಳಿಗೆ ಹಿತನ್, ಒಂದು ಹಾಡಿಗೆ ರ‍್ಯಾಪರ್ ಅಲೋಕ್ ಬಾಬು ರಾಗ ಸಂಯೋಜಿಸಿದ್ದು ತಮ್ಮದೇ ಯೂಟ್ಯೂಬ್ ಚಾನೆಲ್ನಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ ಶೈಲೇಂದ್ರ ಬಾಬು ಹೇಳಿದ್ದಾರೆ.