ಜೀವನದಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಕಂಡಿದ್ದ ಮಂಜು ಪಾವಗಡ, ಬಿಗ್ ಬಾಸ್ ಮನೆಯಲ್ಲಿ ಸಂತೋಷದ ಜೀವನ ಕಂಡುಕೊಳ್ಳುವ ಲೆಕ್ಕಚಾರ ಇಟ್ಟುಕೊಂಡು ಬಂದರಾದರೂ ಅದು ತಲೆಕೆಳಗಾಯಿತು.
ಹೌದು, ಮಂಜು ಮಂಜು ಪಾವಗಡ ಮೂಲತಃ ಹಾಸ್ಯಗಾರ. ಮಜಾ ಭಾರತದ ಮೂಲಕ ವೇದಿಕೆಯಿಂದ ಜನತೆಗೆ ಪರಿಚಿತನಾದ ಮಂಜು ಬಿಗ್ ಬಾಸ್ ಎಂಬ ಅತಿದೊಡ್ಡ ವೇದಿಕೆ ಮುಖಾಂತರ ಜಗತ್ತಿಗೆ ತನ್ನನ್ನು ಪರಿಚಯಿಸಿಕೊಳ್ಳಬೇಕೆಂಬ ಆಸೆಯನ್ನಿಟ್ಟುಕೊಂಡು ಬಂದವರು. ಆದರೆ ನಡೆದಿದ್ದೇ ಬೇರೆ.
ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಮಂಜು ಪಾವಗಡ ಬಿಗ್ ಬಾಸ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಬಿಗ್ ಬಾಸ್ ರದ್ದುಗೊಳಿಸುವ ನಿರ್ಧಾರ ಕೇಳಿದಾಕ್ಷಣ ಅವರ ಆಸೆಗೆ ತಣ್ಣೀರು ಎರಚಿದಂತಾಯಿತು. ಮುಖದ ಭಾವನೆಯೇ ಬದಲಾಯಿತು. ಮಂಜು ಪಾವಗಡ ಹಾಗೂ ಕೆ.ಪಿ. ಅರವಿಂದ್ ಮನೆಯ ಸ್ಟ್ರಾಂಗ್ ಕಂಟೆಸ್ಟೆಂಟ್ ಗಳಾಗಿದ್ದರು, ಫಿನಾಲೆಯಲ್ಲಿ ಇವರಿಬ್ಬರೂ ಕಾಣಿಸಿಕೊಳ್ಳುವ ಸಾಧ್ಯತೆಯೂ ದಟ್ಟವಾಗಿದ್ದು, ಮಂಜು ಪಾವಗಡ ಫಿನಾಲೆಯಲ್ಲಿ ಗೆಲ್ಲುವ ಆತ್ಮವಿಶ್ವಾಸವನ್ನು ಕೂಡ ಹೊಂದಿದ್ದರು. ಆದರೆ ಇದೀಗ ತಮ್ಮ ದುರಾದೃಷ್ಟ ನೆನೆದು ಬೇಸರ ಹೊರಹಾಕಿದ್ದಾರೆ.
ಮನೆಯ ಅನೇಕ ಸದಸ್ಯರು ಕೊರೊನಾದಿಂದ ಆಗಿರುವ ದುರಂತವನ್ನು ಕಂಡು ಬೇಸರ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಮನೆಯವರನ್ನು ನೆನೆದು ದುಃಖಪಟ್ಟರು. ಆದರೆ ಮಂಜು ಪಾವಗಡ ಮಾತ್ರ ತಮ್ಮ ದುರಾದೃಷ್ಟ ನೆನೆದು ದುಃಖಪಟ್ಟರು. ತಮ್ಮ ಜೀವನದಲ್ಲಿ ಆರ್ಥಿಕ ಸಂಕಷ್ಟದಿಂದ ದಿನದಲ್ಲಿ ಒಂದೇ ಹೊತ್ತು ಊಟ ಮಾಡಿ ಬದುಕಿದ್ದು, ದುಡ್ಡಿಲ್ಲದೆ ಆಸ್ಪತ್ರೆಗೆ ಹೋಗದೆ ಇದ್ದಿದ್ದನ್ನು ನೆನೆದು ಕಣ್ಣೀರು ಹಾಕಿದ್ದನ್ನು ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿಕೊಂಡಿದ್ದರು.
ಬಿಗ್ ಬಾಸ್ ಗೆದ್ದು 50 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡರೆ ಜೀವನ ರೂಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಮಂಜು ಅವರಿಗೆ ಆತ್ಮವಿಶ್ವಾಸ ಮೂಡಿಸಿತ್ತು. ಆದರೆ, ಹೊರ ಪ್ರಪಂಚದ ಘಟನೆ ಬಗ್ಗೆ ತಿಳಿದಾಗ ಪ್ರಿಯಾಂಕಾ ಜತೆ ಮಂಜು ಮಾತನಾಡಿ, ಸಾವಿರ ಕನಸು ಹೊತ್ತು ಬಿಗ್ ಬಾಸ್ ಮನೆಗೆ ಬಂದಾಗಲೇ ಹೊರಗಿನ ಪ್ರಪಂಚ ಹೀಗಾಗಬೇಕಾ? ಇಲ್ಲಿಂದ ನಾವು ಜೀವನ ಕಟ್ಟಿಕೊಳ್ಳಬೇಕು ಎಂದುಕೊಂಡರೆ ಈಗ ಹೀಗಾಗಿದೆ. ಬಾಕಿಯವರ ಜೀವನ ಸೆಟಲ್ ಆಗಿರಬಹುದು. ಆದರೆ, ನನ್ನ ಜೀವನ ಆ ರೀತಿ ಅಲ್ಲ. ಇಲ್ಲಿಂದ ಏನೋ ಒಂದು ಸಿಗುತ್ತೆ ಎಂದುಕೊಂಡು ಬಂದಿದ್ದೆ, ಆದರೆ ಹೀಗಾಯ್ತು. ನನಗೆ ತುಂಬಾನೇ ಬೇಸರವಾಗುತ್ತಿದೆ ಎಂದು ಮಂಜು ಭಾವುಕರಾಗಿದ್ದಾರೆ.
ಏನೇನೊ ಅಂದ್ಕೊಂಡು ಬಂದಿದ್ದೆ. ಆದರೆ, ಭಗವಂತ ಹೀಗೆ ಮಾಡಿದ. ಪ್ರತೀ ಬಾರಿ ನಾವೇ ಸಿಕ್ತೀವಾ? ಜೀವನದಲ್ಲಿ ಸಾಕಷ್ಟು ಹೊಡೆಸಿಕೊಂಡು ಬಂದಿದ್ದೇನೆ. ಇಂಥ ದೊಡ್ಡ ವೇದಿಕೆಗೆ ಬಂದರೂ ದುರಾದೃಷ್ಟವೇ ಕೈ ಹಿಡಿಯಿತಲ್ಲ ಅನ್ನೋದು ಬೇಸರದ ಸಂಗತಿ ಎಂದು ಮಂಜು ಪಾವಗಡ ನೊಂದುಕೊಂಡಿದ್ದಾರೆ.