ಬರೋಬ್ಬರಿ 19 ವರ್ಷಗಳ ನಂತರ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಮತ್ತು ನಟ ಕಮಲ್ ಹಾಸನ್ ಮತ್ತೆ ಒಂದಾಗಿದ್ದಾರೆ.
ರಾಜಕೀಯ ಹಿನ್ನೆಲೆ ಹೊಂದಿರುವ ಕಮಲ್ ಹಾಸನ್ ನಟನೆಯ 'ತಲೈವಾನ್ ಇರುಕಿಂದ್ರಾನ್' ಚಿತ್ರಕ್ಕೆ ರೆಹಮಾನ್ ಸಂಗೀತ ಸಂಯೋಜನೆ ಮಾಡಲು ಒಪ್ಪಿಕೊಂಡಿದ್ದಾರೆ. ಸೋಮವಾರ ಟ್ವೀಟ್ ಮಾಡುವ ಮೂಲಕ ರೆಹಮಾನ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ತೆನಾಲಿ ಇವರ ಕೊನೆಯ ಚಿತ್ರವಾಗಿತ್ತು. ಇಬ್ಬರ ಕಾಂಬಿನೇಷನ್ಲ್ಲಿ ಅಂದು ತೆರೆಕಂಡ ಈ ಚಿತ್ರಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ನಂತರ ಕಾರಣಾಂತರಗಳಿಂದ ಇಬ್ಬರು ದೂರವೇ ಉಳಿದಿದ್ದರು. ಇದೀಗ ಮತ್ತೆ ಒಂದಾಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಚಿತ್ರಕ್ಕೆ ನಾನು ಸಂಗೀತ ನೀಡುತ್ತಿರುವುದು ಖಷಿ ತರಿಸಿದೆ ಎಂದು ರೆಹಮಾನ್ ಟ್ವೀಟ್ ಮಾಡಿದರೆ, ಕಮಲ್ ಹಾಸನ್ ಕೂಡ ಪ್ರತಿ ಟ್ವೀಟ್ ಮಾಡಿ ನಿಮ್ಮ ಆಗಮನದಿಂದ ಇನ್ನಷ್ಟು ಬಲ ಬಂದಂತಾಗಿದೆ. ನಮಗೆ ಶಕ್ತಿ ತುಂಬಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಕಮಲ್ ಹಾಸನ್ ಇದೀಗ ತಮಿಳಿನ ಬಿಗ್ಬಾಸ್ -ಸೀಸನ್ 3ರಲ್ಲಿ ಬ್ಯುಸಿ ಆಗಿದ್ದಾರೆ.