ಕೆಲವು ದಿನಗಳ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ್ ನಮನ' ಕಾರ್ಯಕ್ರಮ ಆಯೋಜಿಸಿತ್ತು. ಇದೀಗ ಕನ್ನಡ ಕಿರುತೆರೆಯ ಕಲಾವಿದರು ಮತ್ತು ತಂತ್ರಜ್ಞರು ಪುನೀತ್ ಹೆಸರಲ್ಲಿ ವಿಶೇಷ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ.
ರಾಘವೇಂದ್ರ ರಾಜ್ಕುಮಾರ್ ಕುಟುಂಬಕ್ಕೆ ಅಪ್ಪು ಅಮರ ಕಾರ್ಯಕ್ರಮಕ್ಕೆ ಆಹ್ವಾನ ಪುನೀತ್ ಸಿನಿಮಾಗಳಲ್ಲಿ ಮಾತ್ರ ಸೂಪರ್ ಸ್ಟಾರ್ ಆಗಿರಲಿಲ್ಲ, ಕಿರುತೆರೆಯಲ್ಲಿ ಕೂಡ ಕೋಟ್ಯಂತರ ಅಭಿಮಾನಿಗಳ ಅಚ್ಚುಮೆಚ್ಚಿನ ಸ್ಟಾರ್ ಆಗಿದ್ದರು. ಕಿರುತೆರೆಯಲ್ಲಿ ಕನ್ನಡದ ಕೋಟ್ಯಧಿಪತಿ, ಫ್ಯಾಮಿಲಿ ಪವರ್ ಶೋಗಳನ್ನು ನಡೆಸಿಕೊಡುವ ಮೂಲಕ ಕಿರುತೆರೆಯಲ್ಲೂ ತನ್ನದೇ ಛಾಪು ಮೂಡಿಸಿದ್ದರು. ಹೀಗಾಗಿ ಕರ್ನಾಟಕ ಟಿಲಿವಿಷನ್ ಅಸೋಸಿಯೇಷನ್ ವತಿಯಿಂದ 'ಅಪ್ಪು ಅಮರ' ಎಂಬ ಕಾರ್ಯಕ್ರಮ ಮಾಡಲಾಗುತ್ತಿದೆ.
ನವೆಂಬರ್ 28ರ ಭಾನುವಾರ ಸಂಜೆ 4 ಗಂಟೆಗೆ ಜಯನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್.ಕಲಾಕ್ಷೇತ್ರದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಟಿಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ.ಶಿವಕುಮಾರ್ ಇಂದು ರಾಜ್ಕುಮಾರ್ ಕುಟುಂಬದವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಕಿರುತೆರೆಯ ಬಹುತೇಕ ಕಿರುತೆರೆಯ ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ನವೆಂಬರ್ 28ರಂದು ಯಾವುದೇ ಧಾರಾವಾಹಿಗಳ ಚಿತ್ರೀಕರಣ ಇರುವುದಿಲ್ಲ ಎಂದು ತಿಳಿದು ಬಂದಿದೆ. ಈ ಕಾರ್ಯಕ್ರಮದ ರೂಪುರೇಷೆ ಹೇಗಿರಲಿದೆ ಎಂಬ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ಎಸ್.ವಿ. ಶಿವಕುಮಾರ್ ತಿಳಿಸಿದರು.