ಕನ್ನಡದ ಸುಪ್ರಸಿದ್ಧ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಈಗ ಇಪ್ಪತ್ತು ವರ್ಷಗಳನ್ನು ಪೂರೈಸಿದೆ. 2 ದಶಕದ ಈ ಸಾಧನೆಯ ಹಾದಿಯಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳು ಈ ಆಡಿಯೋ ಕಂಪನಿ ಮೂಲಕ ಹೊರಹೊಮ್ಮಿವೆ.
ಕನ್ನಡದಲ್ಲಿ ಬಹಳಷ್ಟು ಆಡಿಯೋ ಕಂಪನಿಗಳು ಇವೆ. ದಿನದಿಂದ ದಿನಕ್ಕೆ ಹೊಸ ಹೊಸ ಆಡಿಯೋ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಆನಂದ್ ಆಡಿಯೋ ಮಾತ್ರ ಮಾರ್ಕೆಟ್ನಲ್ಲಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡಿದೆ. ಆಡಿಯೋದ ಜೊತೆಗೆ 'ಫ್ರೆಂಡ್ಸ್' ಹಾಗೂ 'ವಿಕ್ಟರಿ' ಸಿನಿಮಾವನ್ನೂ ಈ ಸಂಸ್ಥೆ ನಿರ್ಮಾಣ ಮಾಡಿದೆ. ಕ್ಯಾಸೆಟ್ ಯುಗದಿಂದ ಯೂಟ್ಯೂಬ್ ಯುಗದವರೆಗೂ ಆನಂದ್ ಆಡಿಯೋ ಅಗ್ರ ಸ್ಥಾನದಲ್ಲಿ ಇದೆ. ಆಡಿಯೋ ಉದ್ಯಮದಲ್ಲಿ ಎರಡು ದಶಕಗಳನ್ನು ಪೂರೈಸಿರುವ ಆನಂದ್ ಆಡಿಯೋ ಸಂಸ್ಥೆ ಈವರಗೆ ಸುಮಾರು 700 ಸಿನಿಮಾಗಳ ಹಾಡುಗಳನ್ನು ಹೊರತಂದಿದೆ. ಸುಮಾರು 12000 ಭಕ್ತಿಗೀತೆಗಳು ಕೂಡಾ ಆನಂದ್ ಆಡಿಯೋದಿಂದ ಹೊರ ಬಂದಿವೆ.
ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ 'ಹಬ್ಬ' ಸಿನಿಮಾದ ಮೂಲಕ ಆನಂದ್ ಆಡಿಯೋ ಸಂಸ್ಥೆ ಹುಟ್ಟಿಕೊಂಡಿತು. ಮೋಹನ್ ಛಾಬ್ರಿಯ ಹಾಗೂ ಶ್ಯಾಮ್ ಆನಂದ್ ಆಡಿಯೋ ಸಂಸ್ಥೆಯ ಮಾಲೀಕರು. ಸದ್ಯ ಮೋಹನ್ ಛಾಬ್ರಿಯ ನಿಧನದ ನಂತ್ರ ಇದರ ಹೊಣೆಯನ್ನು ಶ್ಯಾಮ್ ಹಾಗೂ ಮೋಹನ್ ಪುತ್ರ ಆನಂದ್ ನಡೆಸಿಕೊಂಡು ಹೋಗುತ್ತಿದ್ದಾರೆ. 1989ರಲ್ಲಿ ಟ್ರೆಂಡಿಂಗ್ನಲ್ಲಿ ಇದ್ದದ್ದು ಇದೇ ಆನಂದ್ ಆಡಿಯೋ ಸಂಸ್ಥೆ. ಟಿವಿ ರೈಟ್ಸ್ಗಳನ್ನು ನೋಡಿಕೊಳ್ಳುತ್ತಿದ್ದ ಮೋಹನ್ ಛಾಬ್ರಿಯ 1989ರಲ್ಲಿ ಆನಂದ್ ಮ್ಯೂಸಿಕ್ ಸಂಸ್ಥೆಯನ್ನು ಚಿಕ್ಕದಾಗಿ ಆರಂಭಿಸಿದರು.
ಸುದೀಪ್, ಗಣೇಶ್, ಧ್ರುವ ಸರ್ಜಾ, ಶರಣ್, ಶ್ರೀಮುರಳಿ, ಶಿವರಾಜ್ಕುಮಾರ್, ಪುನೀತ್ ರಾಜ್‍ಕುಮಾರ್, ಯಶ್, ದರ್ಶನ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳ ಆಡಿಯೋವನ್ನು ಈ ಸಂಸ್ಥೆ ಹೊರತಂದಿದೆ. ಶ್ರೀಮುರಳಿ ಚೊಚ್ಚಲ ಚಿತ್ರ ಚಂದ್ರಚಕೋರಿ ಸಿನಿಮಾದ ಆಡಿಯೋವನ್ನು ಆ ಕಾಲದಲ್ಲೇ ದೊಡ್ಡ ಮೊತ್ತ ನೀಡಿ ಆನಂದ್ ಆಡಿಯೋ ಸಂಸ್ಥೆ ಕೊಂಡುಕೊಂಡಿತ್ತು. ಅಂಬರೀಶ್ ಕೊನೆ ಚಿತ್ರ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಆಡಿಯೋ ಕೂಡಾ ಆನಂದ್ ಆಡಿಯೋ ಹೆಸರಿನಲ್ಲಿ ಇದೆ. ವಿಷ್ಣುವರ್ಧನ್ ಯಜಮಾನ ಹಾಗೂ ಮುಂಗಾರು ಮಳೆ ಆನಂದ್ ಆಡಿಯೋದ ಮೂಲಕ ಬಂದ ದೊಡ್ಡ ಆಡಿಯೋ ಹಿಟ್ ಸಿನಿಮಾಗಳು. ಈ ಎರಡು ಚಿತ್ರಗಳ ಬರೋಬ್ಬರಿ 10 ಲಕ್ಷ ಕ್ಯಾಸೆಟ್ ಸೇಲ್ ಆಗಿವೆ.
ತವರಿಗೆ ಬಾ ತಂಗಿ, ಅಮೃತಧಾರೆ, ಚೆಲುವಿನ ಚಿತ್ತಾರ, ಚಿತ್ರ, ಕೃಷ್ಣನ್ ಲವ್ ಸ್ಟೋರಿ, ಮೈನಾ, ರ್‍ಯಾಂಬೋ ಹೀಗೆ ಈ ಸಂಸ್ಥೆಯ ದೊಡ್ಡ ಹಿಟ್ ಆದ ಚಿತ್ರಗಳ ಪಟ್ಟಿ ಬಹಳ ದೊಡ್ಡದಿದೆ. ಆನಂದ್ ಆಡಿಯೋ ಈವರೆಗೂ ದೊಡ್ಡ ಮೊತ್ತ ನೀಡಿ, ಸಾಕಷ್ಟು ಸಿನಿಮಾಗಳ ಆಡಿಯೋ ಖರೀದಿಸಿದೆ. ಆ ಪೈಕಿ 'ದಿ ವಿಲನ್' ಸಿನಿಮಾ ಮೊದಲ ಸ್ಥಾನದಲ್ಲಿ ಇದೆ. ಇನ್ನು ದೇವಕಿ, 99, ಅಮರ್, ಭರಾಟೆ, ಕೋಟಿಗೊಬ್ಬ 3, ಮದಗಜ ಹೀಗೆ ಸಾಕಷ್ಟು ಇನ್ನೂ ಬಿಡುಗಡೆಯಾಗಬೇಕಿರುವ ಸಿನಿಮಾಗಳು ಈ ಸಂಸ್ಥೆ ತೆಕ್ಕೆಯಲ್ಲಿವೆ.
ಆನಂದ್ ಆಡಿಯೋದ 20 ವರ್ಷದ ಸಂಭ್ರಮದಲ್ಲಿ 'ಚುಟು ಚುಟು' ಹಾಡು ದೊಡ್ಡ ಮೈಲಿಗಲ್ಲು ಸಾಧಿಸಿದೆ. 'ರ್‍ಯಾಂಬೋ 2' ಸಿನಿಮಾದ ಈ ಹಾಡು 75 ಮಿಲಿಯನ್ ಹಿಟ್ಸ್ ಪಡೆಯುವ ಮೂಲಕ ಯೂಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಕನ್ನಡದ ಹಾಡಾಗಿದೆ. ಅಯೋಗ್ಯ ಚಿತ್ರದ 'ಏನಮ್ಮಿ ಏನಮ್ಮಿ' ಹಾಡು ಕೂಡ 50 ಮಿಲಿಯನ್ ಹಿಟ್ಸ್ ಪಡೆದುಕೊಂಡಿರೋದು ಆನಂದ್ ಆಡಿಯೋ ಸಂಸ್ಥೆಯ ಹೆಗ್ಗಳಿಕೆ.