ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‍ಗೆ ಒಂದರ ಹಿಂದೊಂದರಂತೆ ಅವಕಾಶಗಳು ಹುಡುಕಿ ಬರುತ್ತಿವೆ. ಈಗ ಅವರು ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ.ಈ ಹಿಂದೆ ತೂಫಾನ್, ಬಳ್ಳಾರಿ ದರ್ಬಾರ್ ಹಾಗೂ 18 ಟು 25 ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್‍ಶ್ರೀನು ಈಗ ಮತ್ತೊಂದು ವಿಭಿನ್ನ ಪ್ರೇಮಕಥೆಯನ್ನು ತೆರೆಮೇಲೆ ತರಲು ಹೊರಟಿದ್ದಾರೆ.
ತಮ್ಮ ಹೊಸ ಚಿತ್ರಕ್ಕೆ ಸ್ಮೈಲ್ ಸೀನು 'ಓ ಮೈ ಲವ್' ಎಂಬ ಶೀರ್ಷಿಕೆಯನ್ನು ಫೈನಲ್ ಮಾಡಿದ್ದಾರೆ. ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಹೇಳಲಾಗಿದೆ. ರಾಮಾಂಜನಿ ಎನ್ನುವವರು ಈ ಚಿತ್ರದ ಕಥೆ ಬರೆಯುವುದರೊಂದಿಗೆ ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ರಚಿಸಿದ್ದಾರೆ. ರೊಮ್ಯಾಂಟಿಕ್ ಲವ್‍ಸ್ಟೋರಿ ಜೊತೆಗೆ ಕೌಟುಂಬಿಕ ಹಾಗೂ ಹಾಸ್ಯ ಮಿಶ್ರಣ ಹೊಂದಿದೆ ಈ ಸಿನಿಮಾ.