ನಟಿ ಸಂಜನಾ ಗಲ್ರಾನಿ ಹಳೆಯ ಸ್ನೇಹಿತ ರಾಹುಲ್ ತೊನ್ಸೇ ಎಂಬುವರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನಿಂದ ಹಣ ಹೂಡಿಕೆ ಮಾಡಿಸಿಕೊಂಡು ಮೂರು ವರ್ಷವಾದರೂ ಲಾಭಾಂಶ ಹಾಗೂ ಅಸಲು ನೀಡದೆ ವಂಚಿಸಿರುವುದಾಗಿ ಆರೋಪಿಸಿದ್ದಾರೆ. ರಾಹುಲ್ ಸೇರಿದಂತೆ ಮೂವರ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಸಂಜನಾ ದೂರು ನೀಡಿದ್ದಾರೆ.
ಸಂಜನಾ ಮತ್ತು ಹಳೆಯ ಸ್ನೇಹಿತ ರಾಹುಲ್ ತೊನ್ಸೇ ಕೊಲಂಬೊ ಹಾಗೂ ಗೋವಾದ ಕ್ಯಾಸಿನೊ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವುದಾಗಿ ಹೇಳಿಕೊಂಡಿದ್ದ ರಾಹುಲ್, ತಾವು ಹೇಳಿದ ಕಡೆಗಳಲ್ಲಿ ಹಣ ವಿನಿಯೋಗಿಸಿದರೆ ಹೆಚ್ಚು ಹಣ ಸಂಪಾದನೆ ಮಾಡಬಹುದು ಎಂದು ಮೂರು ವರ್ಷಗಳ ಹಿಂದೆ ಆಶ್ವಾಸನೆ ನೀಡಿದ್ದರು ಎಂದು ಸಂಜನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸಂಜನಾ ಗಲ್ರಾನಿ, ರಾಹುಲ್ ತೊನ್ಸೇ ಜೊತೆಗಿನ ಒಡನಾಟ ಹಾಗೂ ಮೋಸದ ಬಗ್ಗೆ ವಿವರವಾದ ಪತ್ರ ಬರೆದಿದ್ದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅದರ ಸಂಪೂರ್ಣ ಸಾರಾಂಶ ಹೀಗಿದೆ :ನಿನ್ನೆಯಿಂದ ಹೊಸದೊಂದು ಸುದ್ದಿ ಹಬ್ಬುತ್ತಿದೆ. ಏನೆಂದರೆ ಈಗಾಗಲೇ ನೊಂದು ಹೋಗಿರುವ ನನಗೆ ಈ ವದಂತಿಗಳು ಇನ್ನೂ ದುಃಖಕ್ಕೆ ತಳ್ಳಿವೆ. ಹೌದು, ನಾನು ಸಹೋದರನಂತೆ ನಂಬಿದ್ದ ರಾಹುಲ್ ಮತ್ತು ಅವರ ತಂದೆ-ತಾಯಿ ನನಗೆ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿ ನಂತರ ವಾಪಸ್ ಕೊಡುವುದಾಗಿ ನಂಬಿಸಿ ವಂಚಿಸಿದ್ದಾರೆ.
ಆತನ ವ್ಯವಹಾರಕ್ಕೆ ನಾನು ಕಷ್ಟ ಪಟ್ಟು ದುಡಿದ ಹಣವನ್ನ ಆತನ ತಂದೆ ತಾಯಿಗಳೇ ಕೇಳಿದರೆಂದೇ ಅವರ ಖಾತೆಗೆ ಹಾಕಿದ್ದೆ. ಆತ ಹಲವಾರು ತಿರುವಿನ ನಂತರ ಹಣ ವಾಪಸ್ ಮಾಡದೇ ಹೋದಾಗ ನ್ಯಾಯಾಲಯದ ಮೊರೆ ಹೋದೆ. ನಾನು ನೀಡಿದ ಹಣ ಕ್ಯಾಸಿನೊ ವ್ಯವಹಾರಕ್ಕಲ್ಲ. ಕ್ಯಾಸಿನೊ ಆಡುವಷ್ಟು ಶ್ರೀಮಂತಳೂ ಅಲ್ಲ. ಅಂತಹ ಜೂಜಿನ ಯಾವುದೇ ಹವ್ಯಾಸಗಳಿಲ್ಲ. ಇದು ಸಹೋದರನೊಬ್ಬ ಮಾಡಿದ ಮೋಸದ ನೊಂದ ಹೆಣ್ಣಿನ ಕಥೆ. ದಯಮಾಡಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಬೇಡುತ್ತೇನೆ.
ಹಣವನ್ನು ನಾನು ವಾಪಸ್ ಕೇಳಿದಾಗ ಆತ ಮತ್ತು ಆತನ ಪೋಷಕರು ನನಗೆ ಅವಾಚ್ಯ ಶಬ್ಧಗಳಿಂದ ಬೈದು ಮಾನ ಹಾನಿ ಮಾಡಿರುತ್ತಾರೆ. ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈ ಸಲುವಾಗಿ ನಾನು ನ್ಯಾಯಾಲಯದ ಮೊರೆ ಹೋಗಿರುವೆ. ರಾಹುಲ್ ಮತ್ತು ಆತನ ಪೋಷಕರ ವಿರುದ್ಧ ದೂರು ಸಲ್ಲಿಸಿರುತ್ತೇನೆ.
ನಾನು ಕೌಟುಂಬಿಕ ಚೌಕಟ್ಟಿನಲ್ಲಿರುವ ಗೃಹಿಣಿ. ಈಗ ನೀವು ತೋರಿಸುವ ಒಂದೊಂದು ಸುದ್ದಿಯೂ ನನ್ನ ಕುಟುಂಬವನ್ನೂ ಘಾಸಿಗೊಳಿಸುತ್ತದೆ. ನಾ ಎಲ್ಲದಕ್ಕೂ ಉತ್ತರದಾಯಿಯಾಗಿದ್ದೇನೆ. ಈ ಸಹೋದರನ ಕಾರಣಕ್ಕಾಗಿ ನಾನು ಹಲವಾರು ಸಂಕಷ್ಟಗಳನ್ನ ಅನುಭವಿಸಿದ್ದೇನೆ. ಮಾನ ಹಾನಿಯೂ ಆಗಿ ಈಗ ಜೀವಂತವಿರುವುದಕ್ಕೆ ಸಂಘರ್ಷ ಮಾಡುವಂತಹ ಸಂಧರ್ಭದಲ್ಲಿ ಈತನ ಈ ನೋವನ್ನೂ ಸಹಿಸಬೇಕಾಗಿದೆ. ನಾನು ನನ್ನ ಮನೆಯಲ್ಲಿಲ್ಲದ ಕಾರಣ ಈ ಪತ್ರ ಮತ್ತು 2 ವಿನಮ್ರಪೂರ್ವಕ ವಿವರಣೆಯನ್ನು ಕಳಿಸುತ್ತಿದ್ದೇನೆ.
ದಯಮಾಡಿ ನಿಮ್ಮ ಮನೆಯ ಮಗಳೆಂದು ಪರಿಗಣಿಸಿ. ನ್ಯಾಯಾಲಯದ ಮೇಲೆ ಕಾನೂನು ವ್ಯವಸ್ಥೆಯ ಬಗ್ಗೆ ಅಪಾರ ನಂಬಿಕೆ ಇರುವ ನನಗೆ ನ್ಯಾಯ ಸಿಗುತ್ತದೆಂದು ನಂಬಿದ್ದೇನೆ. ಒಬ್ಬ ವ್ಯಕ್ತಿಯನ್ನು ನಾನು ನನ್ನ ಒಡಹುಟ್ಟಿದ ಸಹೋದರ ಎಂದು ಪರಿಗಣಿಸಿದ್ದೆ. ನಾವು ಒಂದೇ ತಟ್ಟೆಯಲ್ಲಿ ಊಟ ಮಾಡಿದ ಸಮಯವಿದೆ. ಆತ ಊಟ ಮಾಡಿದ ತಟ್ಟೆಯಲ್ಲಿ ಎಂಜಲು ಉಗುಳುವ ಕೆಲಸ ಮಾಡಿ, ನನಗೆ ದ್ರೋಹ ಬಗೆದಿದ್ದಾನೆ.
ನನ್ನ ಹೆಸರು, ನನ್ನ ಖ್ಯಾತಿ, ನನ್ನ ಘನತೆಗೆ ಧಕ್ಕೆ ತಂದಿದ್ದಲ್ಲದೆ, ನನ್ನ ಆರ್ಥಿಕವಾಗಿಯೂ ನಾಶ ಮಾಡಿದ್ದಾನೆ. ಇಷ್ಟಾದರೂ ನಾನು ಮಾನವೀಯತೆಯ ದೃಷ್ಟಿಯಿಂದ ದೇವರಲ್ಲಿ ಪ್ರಾರ್ಥಿಸುತ್ತೇನೆ, ಅವರ ತಂದೆ, ತಾಯಿಯರು ಹಿರಿಯರಿದ್ದಾರೆ. ಅವರ ಸಲುವಾಗಿ ನಾನು ದೇವರಲ್ಲಿ ಮತ್ತೊಮ್ಮೆ ಪ್ರಾರ್ಥಿಸುವುದು ಇಷ್ಟೇ, ಆದಷ್ಟು ಬೇಗ ಈ ಎಲ್ಲಾ ಪ್ರಕರಣಗಳು ಸಖಾಂತ್ಯವಾಗಲಿ.
ವಿನಮ್ರ ವಿನಂತಿ, ನಾನು ನನ್ನ ನಿವಾಸದಲ್ಲಿ ಲಭ್ಯವಿಲ್ಲದ ಕಾರಣ ಮಾಧ್ಯಮ ಮಿತ್ರರಿಗೆ ಲಭ್ಯವಿಲ್ಲ. ದಯವಿಟ್ಟು ನನ್ನ ವಿವರಣೆಯನ್ನು ನನ್ನ ತೀರ್ಮಾನ ಎಂದು ಪರಿಗಣಿಸಿ. ಈ ದೇಶದ ಕಾನೂನು ಮತ್ತು ನ್ಯಾಯಾಲಯದ ವ್ಯವಸ್ಥೆ ಬಗ್ಗೆ ನನಗೆ ಅಪಾರ ನಂಬಿಕೆ ಇದೆ.