ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ಹಾಡುಗಾರ ನಿಕ್ ಜೋಹಾನ್ಸ್ ಸತಿಪತಿಗಳಾಗಿ ಬರೋಬ್ಬರಿ 117 ದಿನಗಳಾಯ್ತು. ಈ ಜೋಡಿ ಪರಸ್ಪರ ಮೆಚ್ಚಿಕೊಂಡೇ ಮದುವೆಯಾಗಿದ್ದಾರೆ. ಆದರೆ, ಈಗಾಗಲೇ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಬ್ರಿಟನ್ ಟ್ಯಾಬ್ಲ್ಯಡ್ ಮ್ಯಾಗ್ಜಿನ್ವೊಂದು ಪಿಗ್ಗಿ-ನಿಕ್ ಮಧ್ಯೆ ಎಲ್ಲವೂ ಸರಿಯಿಲ್ಲ ಎಂದು ವರದಿ ಮಾಡಿದೆ. ಹಸೆಮಣೆ ಏರಿ ಇನ್ನೂ ನಾಲ್ಕು ತಿಂಗಳು ಕಳೆದಿಲ್ಲ. ಆಗಲೇ ಈ ನವದಂಪತಿ ನಡುವೆ ಕಿತ್ತಾಟ ಶುರುವಾಗಿದೆ. ಚಿಕ್ಕಪುಟ್ಟ ವಿಷಯಗಳಿಗೂ ಬೆಕ್ಕಿನ ಹಾಗೆ ಜಗಳಾಡುತ್ತಾರೆ. ಅದರಲ್ಲೂ ಪತಿಯನ್ನು ಪಿಗ್ಗಿ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ಧೋರಣೆ ನಿಕ್ ಕುಟುಂಬದವರ ಅಸಮಾಧಾನಕ್ಕೆ ಕಾರಣವಾಗಿದೆ. ಈಗ ಇವರ ವೈಮನಸ್ಸು ಡಿವೋರ್ಸ್ ಹಂತಕ್ಕೆ ತಲುಪಿದ್ದು, ವಿಚ್ಛೇದನ ಪಡೆಯಲು ಡಿಸೈಡ್ ಮಾಡಿದ್ದಾರೆ ಎಂದು 'ಓಕೆ' ಮ್ಯಾಗ್ಜಿನ್ ವರದಿ ಪ್ರಕಟಿಸಿದೆ.
ಆಂಗ್ಲ ಪತ್ರಿಕೆಯ ವರದಿಗೆ ಸತ್ಯಕ್ಕೆ ದೂರುವಾದದ್ದು ಎಂಬುದನ್ನು ಪ್ರಿಯಾಂಕಾ-ನಿಕ್ ಪರೋಕ್ಷವಾಗಿ ಅಲ್ಲಗಳೆದಿದೆ. ನಾಲ್ಕು ದಿನಗಳ ಹಿಂದೆಯಷ್ಟೆ ಮಿಯಾಮಿ ಬೀಚ್‌ನಲ್ಲಿ ರಜೆ ಮೋಜು ಮಾಡಿದ್ದಾರೆ. ಪಿಗ್ಗಿ ಬಿಕಿನಿ ತೊಟ್ಟು ಪತಿರಾಯನ ಕೈ ಹಿಡಿದು ಕಡಲ ತೀರದ ತುಂಬೆಲ್ಲಾ ಓಡಾಡಿ ಖುಷಿಪಟ್ಟಿದ್ದಾರೆ. ಅವರ ಈ ಫೋಟೋಗಳು ನಮ್ಮ ಸಂಬಂಧ ಗಟ್ಟಿಯಾಗಿದೆ ಎಂದು ಸಾರಿ ಹೇಳುತ್ತಿವೆ. ಅಷ್ಟೇ ಏಕೆ ಕಳೆದ ವಾರವಷ್ಟೇ ತನ್ನ ಪತ್ನಿಗೆ ನಿಕ್ ದುಬಾರಿ ಐಷಾರಾಮಿಯ ಮರ್ಸಿಡಿಸ್ ಬೇಂಜ್ ಕಾರು ಗಿಫ್ಟ್ ಮಾಡಿದ್ದಾರೆ. ಇಷ್ಟು ಅನ್ಯೋನ್ಯವಾಗಿರುವ ಈ ಜೋಡಿ ಮಧ್ಯೆ ಬಿರುಕು ಮೂಡಲು ಸಾಧ್ಯವೇ ಇಲ್ಲ ಎಂದು ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ.