ನಟ ಕಮಲ್ ಹಾಸನ್‌ಗೆ ಇಂದು 67ನೇ ಜನ್ಮದಿನದ ಸಂಭ್ರಮ. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಕಮಲ್ ವೃತ್ತಿ ಬದುಕಿಗೆ ಈಗ 62 ವರ್ಷ ತುಂಬಿದೆ. ತಮಿಳು ನಟನಾದರೂ, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಸಿನಿಮಾಗಳಲ್ಲೂ ನಟಿಸಿ, ಪಂಚಭಾಷಾ ನಟ ಎನಿಸಿಕೊಂಡಿರುವ ಕಮಲ್ ಚಂದನವನದ ಐದು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಕೋಕಿಲದಲ್ಲಿ ಕಮಲ್ ಕಲರವ: 1959ರಲ್ಲಿ ಬಾಲನಟನಾಗಿ ಕಮಲ್ ಹಾಸನ್ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರೂ ಕನ್ನಡಕ್ಕೆ ಬಂದಿದ್ದು 1977ರಲ್ಲಿ ತೆರೆಗೆ ಬಂದ 'ಕೋಕಿಲ' ಚಿತ್ರದ ಮೂಲಕ. ಬಾಲು ಮಹೇಂದ್ರ ನಿರ್ದೇಶನ ಮಾಡಿದ್ದ 'ಕೋಕಿಲ' ಚಿತ್ರದಲ್ಲಿ ಕಮಲ್‌ಗೆ ವಿಜಯ್‌ಕುಮಾರ್ ಅನ್ನೋ ಪಾತ್ರವಿತ್ತು. ಅವರಿಗೆ ಜೋಡಿಯಾಗಿ ಶೋಭಾ ನಟಿಸಿದ್ದರು. ವಿಶೇಷವೆಂದರೆ, ಈ ಸಿನಿಮಾಗೆ ಅತ್ಯುತ್ತಮ ಛಾಯಾಗ್ರಹಣ ರಾಷ್ಟ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಚಿತ್ರಕಥೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಅಲ್ಲದೆ, ಮಲಯಾಳಂ ಭಾಷೆಗೆ 'ಊಮ ಕುಯಿಲ್' ಎಂದು ರಿಮೇಕ್ ಆದರೆ, ಹಿಂದಿಗೆ 'ಔರ್ ಏಕ್ ಪ್ರೇಮ್ ಕಹಾನಿ' ಹೆಸರಿನಲ್ಲಿ ರಿಮೇಕ್ ಆಗಿತ್ತು. ಸ್ಯಾಂಡಲ್ವುಡ್ ಹಿರಿಯ ನಟ ರಮೇಶ್ ಅರವಿಂದ್ ಹಿಂದಿ ರಿಮೇಕ್‌ನಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದು ವಿಶೇಷ.
'ತಪ್ಪಿದ ತಾಳ'ದಲ್ಲಿ ಕಮಲ್:ಕಮಲ್ ಹಾಸನ್ ವೃತ್ತಿ ಜೀವನದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ ಕೀರ್ತಿ ನಿರ್ದೇಶಕ ಕೆ. ಬಾಲಚಂದರ್ ಅವರದ್ದು. ಕಮಲ್ ರೀತಿಯೇ ರಜನೀಕಾಂತ್ ಅವರಿಗೂ ಸಹ ಬಾಲಚಂದರ್ ಕನ್ನಡ-ತಮಿಳಿನಲ್ಲಿ ಏಕಕಾಲಕ್ಕೆ 'ತಪ್ಪಿದ ತಾಳ' ಸಿನಿಮಾ ಮಾಡಿದ್ದರು. ಇದರಲ್ಲಿ ರಜನೀಕಾಂತ್ ಹೀರೋ ಆಗಿದ್ದರೆ ಸರಿತಾ ನಾಯಕಿ. ಈ ಚಿತ್ರದಲ್ಲಿ ಅಮ್ರಿತ್ ಲಾಲ್ ಅನ್ನೋ ಸಣ್ಣ ಪಾತ್ರವೊಂದಕ್ಕೆ ಕಮಲ್ ಬಣ್ಣ ಹಚ್ಚಿದ್ದರು. ಆ ಪಾತ್ರಕ್ಕೆ ಅವರೇ ಡಬ್ ಮಾಡಿರುವುದು ವಿಶೇಷ. 70ರ ದಶಕದಲ್ಲಿ ಕಮಲ್ ಸ್ಟಾರ್ ನಟ. ಹೀಗಿದ್ದರೂ, ಈ ಸಿನಿಮಾದಲ್ಲಿ ಸಣ್ಣ ಪಾತ್ರವೊಂದನ್ನು ನಿಭಾಯಿಸಿದ್ದು ವಿಶೇಷ.