ದೀಪಿಕಾ ಪಡುಕೋಣೆ ಸದ್ಯಕ್ಕೆ ಪತಿ ರಣ್ವೀರ್ ಜೊತೆ ಲಾಕ್ಡೌನ್ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಫ್ರೀ ಇರುವುದರಿಂದ ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ಡಿಪ್ಸ್ ಸಕ್ರಿಯರಾಗಿದ್ದಾರೆ.
ತಮ್ಮ ಶಾಲಾ ದಿನಗಳ, ಕುಟುಂಬದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಹಳೆಯ ದಿನಗಳನ್ನು ನೆನಪಿಸಿಕೊಂಡಿರುವ ದೀಪಿಕಾ, ಇದೀಗ ಕಳೆದ ವರ್ಷ ಫ್ರಾನ್ಸ್ನಲ್ಲಿ ನಡೆದ ಕೇನ್ಸ್ ಚಿತ್ರೋತ್ಸವದ ಗ್ರೀನ್ ರೂಮ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರೋತ್ಸವಕ್ಕೆ ಹೋಗುವ ಮುನ್ನ ಗ್ರೀನ್ ರೂಮ್ನಲ್ಲಿ ತಮ್ಮ ತಂಡದೊಂದಿಗೆ ಫನ್ ಮಾಡುತ್ತಿರುವ ವಿಡಿಯೋವನ್ನು ದೀಪಿಕಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋಗೆ 'ಗ್ರೀನ್ ರೂಮ್ ಶೆನಾನಿಗನ್ಸ್' ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ಕಾರ್ತಿಕ್ ಆರ್ಯನ್ 'ಶೆನಾನಿಗನ್ಸ್' ಎಂದರೆ ಏನು ಎಂದರೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ದೀಪಿಕಾ, ಸಿಲ್ಲಿಯಾಗಿ ವರ್ತಿಸುವುದು, ಉತ್ಸಾಹಭರಿತ ವರ್ತನೆ, ಕೀಟಲೆ ( ನೀನು ಮಾಡುವ ರೀತಿ) ಎಂದು ಉತ್ತರಿಸಿ ನಗುವ ಎಮೋಜಿ ಹಾಕಿದ್ದಾರೆ. ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ವಿಡಿಯೋವನ್ನು 3.7 ಮಿಲಿಯನ್ ಅಭಿಮಾನಿಗಳು ವೀಕ್ಷಿಸಿದ್ದಾರೆ.
ಕಾರ್ತಿಕ್ ಹಾಗೂ ದೀಪಿಕಾ ಈ ರೀತಿ ಇನ್ಸ್ಟಾಗ್ರಾಮ್ನಲ್ಲಿ ಒಬ್ಬರಿಗೊಬ್ಬರು ಕೀಟಲೆ ಮಾಡುವುದು ಇದೇ ಮೊದಲಲ್ಲ. ಇತ್ತೀಚೆಗೆ ಕಾರ್ತಿಕ್ ಆರ್ಯನ್ ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳೊಂದಿಗೆ ಲೈವ್ ಬಂದು, ನನ್ನ ಗಡ್ಡವನ್ನು ಶೇವ್ ಮಾಡಬೇಕೇ ಬೇಡವೇ ಎಂದು ಪ್ರಶ್ನಿಸಿದಾಗ ಹುಡುಗಿ ಕೈಯನ್ನು ಮೇಲೆ ಎತ್ತಿರುವ ಎಮೋಜಿಯನ್ನು ಕಮೆಂಟ್ ಮಾಡಿದ್ದರು ದೀಪಿಕಾ. ಅಂದರೆ ಕಾರ್ತಿಕ್ ಗಡ್ಡವನ್ನು ಶೇವ್ ಮಾಡಬೇಕು ಎಂದು ಅವರು ಆ ಎಮೋಜಿ ಮೂಲಕ ಸೂಚಿಸಿದ್ದರು.
ಪತಿಯನ್ನು ಪ್ರೀತಿಸುವ, ಪತಿ ಹೆಮ್ಮೆ ಪಡುವಂತ ದೀಪಿಕಾ ರೀತಿಯ ಹುಡುಗಿಯನ್ನು ನಾನು ಮದುವೆಯಾಗಬೇಕು ಎಂದು ಕಾರ್ತಿಕ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮನದಾಸೆ ವ್ಯಕ್ತಪಡಿಸಿದ್ದರು.