ಮುಂಬೈ: ಇಲ್ಲಿನ ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಹಿತನುಡಿಯೊಂದನ್ನು ಹಂಚಿಕೊಂಡಿದ್ದಾರೆ. ಅಸಮಾಧಾನ, ಕೋಪ, ಅಸೂಯೆ, ದ್ವೇಷ, ಮತ್ತು ಅನುಮಾನ, ಅವಲಂಬನೆ ಎಂಬ ಆರು ನೆಗೆಟಿವ್ ಪ್ರವೃತ್ತಿಯನ್ನು ಹೊಂದಿರುವ ಜನರ ಕುರಿತು ಎಚ್ಚರಿಕೆ ನೀಡಿದ್ದಾರೆ.
ಆಸ್ಪತ್ರೆಯಿಂದಲೇ 6 'ನೆಗೆಟಿವ್' ಪ್ರವೃತ್ತಿಗಳ ಬಗ್ಗೆ ಅಭಿಮಾನಿಗಳಿಗೆ ಎಚ್ಚರಿಸಿದ ಬಿಗ್ ಬಿ - ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್
ಕೊರೊನಾ 'ಪಾಸಿಟಿವ್' ಬಂದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್, 'ನೆಗೆಟಿವ್' ಪ್ರವೃತ್ತಿಯನ್ನು ಹೊಂದಿರುವ ಜನರಿಂದ ದೂರವಿರಿ ಎಂದು ಅಭಿಮಾನಿಗಳಿಗೆ ಎಚ್ಚರಿಸಿದ್ದಾರೆ.
ಆಸ್ಪತ್ರೆಯಲ್ಲಿದ್ದರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗೆ, ಜನತೆಗೆ ಶುಭ ಕೋರುತ್ತಾ ಇರುವ ಅಮಿತಾಬ್, ಜನರು ಅನೇಕ ವಿಷಯಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಜೀವನದಲ್ಲಿ ಋಣಾತ್ಮಕ 'ಟ್ರೆಂಡ್ ಸೆಟ್ಟರ್'ಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಸಂಸ್ಕೃತದಲ್ಲಿ ಒಂದು ಹಿತನುಡಿಯನ್ನು ಹಂಚಿಕೊಂಡಿದ್ದು, ಅದರ ಅರ್ಥವನ್ನು ವಿವರಿಸಿದ್ದಾರೆ. "ಅಸೂಯೆ ವ್ಯಕ್ತಪಡಿಸುವವರು, ಎಲ್ಲರನ್ನೂ ದ್ವೇಷಿಸುವವರು, ಸದಾ ಅತೃಪ್ತರಾಗಿರುವವರು, ಕೋಪಗೊಳ್ಳುವವರು, ಅನುಮಾನಿಸಿ ನೋಡುವವರು, ಎಲ್ಲದಕ್ಕೂ ಇತರರ ಮೇಲೆ ಅವಲಂಬಿತರಾಗಿರುವವರು.. ಈ ಆರು ರೀತಿಯ ಜನರು ಯಾವಾಗಲೂ ಸಂಕಷ್ಟದಲ್ಲಿರುತ್ತಾರೆ. ಇಂತಹ ಗುಣಲಕ್ಷಣಗಳನ್ನು ಹೊಂದಿರುವ ಜನರಿಂದ ದೂರವಿರಿ, ನಿಮ್ಮನ್ನು ಉಳಿಸಿಕೊಳ್ಳಿ" ಎಂದು ತಿಳಿಸಿದ್ದಾರೆ.