ನವದೆಹಲಿ :ನಗರದ ಉದ್ಯಮಿ ಪತ್ನಿಯಿಂದ 200 ಕೋಟಿ ರೂ. ಸುಲಿಗೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಇಂದು ನಟಿ ಲೀನಾ ಮರಿಯಾ ಪೌಲ್ ಹಾಗೂ ಆಕೆಯ ಗಂಡ ಸುಖೇಶ್ ಚಂದ್ರಶೇಖರ್ನನ್ನು ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿ ಆದೇಶಿಸಿದೆ.
ಆರೋಪಿಗಳು ಫೋರ್ಟಿಸ್ ಹೆಲ್ತ್‌ಕೇರ್ ಪ್ರಮೋಟರ್ ಶಿವಿಂದರ್ ಮೋಹನ್ ಸಿಂಗ್ ಅವರ ಮಾಜಿ ಪತ್ನಿ ಅದಿತಿ ಸಿಂಗ್ ಅವರನ್ನು ವಂಚಿಸಿ, 200 ಕೋಟಿ ರೂ. ಸುಲಿಗೆ ಮಾಡಿದ್ದರು. ಅಲ್ಲದೆ, ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಇಡಿ ಪರ ವಾದ ನಡೆಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ತ್ರಿಪಾಠಿ, ಅಕ್ರಮ ಹಣ ವರ್ಗಾವಣೆ ಯೋಜನೆ ಹಾಗೂ ಅದರ ಹಿಂದೆ ಇರುವ ಆರೋಪಿಗಳನ್ನು ಹಂತ ಹಂತವಾಗಿ ಪತ್ತೆ ಹಚ್ಚಲು ಆರೋಪಿಗಳನ್ನು 14 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡುವಂತೆ ಕೋರಿದ್ದರು.
ವಿಶೇಷ ನ್ಯಾಯಾಧೀಶ ಅನಿಲ್ ಆಂಟಿಲ್ ಅವರು, ದಾಖಲೆಯ ಪ್ರಕಾರ ಆರೋಪಿ ಪಾಲ್ ಹಾಗೂ ಚಂದ್ರಶೇಖರ್ ಅವರ ಮೇಲಿರುವ ಅಪಾದನೆ ಸಾಬೀತಾಗಿದೆ. ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.
ಆಗಸ್ಟ್ನಲ್ಲಿ ಚಂದ್ರಶೇಖರ್ ಅವರ ಕೆಲ ನಿವೇಶನಗಳ ಮೇಲೆ ಇಡಿ ದಾಳಿ ಮಾಡಿ ಚೆನ್ನೈನ ಬಂಗಲೆ ಹಾಗೂ 82.5 ಲಕ್ಷ ರೂ. ನಗದು ಮತ್ತು 12ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿತ್ತು. ಸದ್ಯ ಸುಮಾರು 200 ಕೋಟಿ ರೂ.ಗಳಷ್ಟು ವಂಚನೆ ಮತ್ತು ಸುಲಿಗೆ ಪ್ರಕರಣದ ಕುರಿತು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ನಟ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿಕೆಯನ್ನು ಕೂಡ ದಾಖಲಿಸಲಾಗಿದೆ.