ದೇಶದಲ್ಲಿ ಇತರ ರಾಜ್ಯಗಳಿಂತ ಮಹಾರಾಷ್ಟ್ರದಲ್ಲಿ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್ಗಳು ವರದಿಯಾಗಿವೆ. ಮುಂಬೈನಲ್ಲಿ ಕೂಡಾ ಕೊರೊನಾ ಪೀಡಿತರು ಹೆಚ್ಚಾಗಿದ್ದು ಜನರು ಮನೆಯಲ್ಲಿ ನೆಲೆಸಿದ್ದಾರೆ. ಸಾಮಾನ್ಯರಂತೆ ಸೆಲಬ್ರಿಟಿಗಳು ಕೂಡಾ ಹೋಂ ಕ್ವಾರಂಟೈನ್ನಲ್ಲಿದ್ದಾರೆ.
ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಕೂಡಾ ತಮ್ಮ ಕುಟುಂಬದೊಂದಿಗೆ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಕೊರೊನಾ ಕಾರಣದಿಂದಲೇ ಅಮಿತಾಬ್ ಬಚ್ಚನ್ ಪ್ರತಿ ಭಾನುವಾರದ ಅಭಿಮಾನಿಗಳ ಭೇಟಿಯನ್ನು ಕೂಡಾ ನಿಲ್ಲಿಸಿದ್ಧಾರೆ. ಈ ನಡುವೆ ಅಮಿತಾಬ್ ಮೊಮ್ಮಗಳು, ಐಶ್ವರ್ಯ-ಅಭಿಷೇಕ್ ಮುದ್ದಿನ ಮಗಳು ಆರಾಧ್ಯ ತಮ್ಮ ಮುದ್ದಾದ ಪೇಯ್ಟಿಂಗ್ ಮೂಲಕ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸಿದ್ಧಾರೆ. ಮಗಳು ಮಾಡಿದ ಈ ಪೇಯ್ಟಿಂಗನ್ನು ಐಶ್ವರ್ಯ ರೈ ಹಾಗೂ ಅಭಿಷೇಕ್ ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ.
ನಮಸ್ಕರಿಸಿದಂತೆ ಇರುವ ಎರಡೂ ಕೈಗಳ ಮೇಲೆ ಥ್ಯಾಂಕ್ಯೂ, ಧನ್ಯವಾದ್ ಎಂದು ಹಿಂದಿ ಹಾಗೂ ಇಂಗ್ಲೀಷ್ ಅಕ್ಷರಗಳಲ್ಲಿ ಬರೆದಿರುವ ಆರಾಧ್ಯ ಒಂದು ಕಡೆ ಪೌರಕಾರ್ಮಿಕರು, ಡಾಕ್ಟರ್, ನರ್ಸ್, ಪೊಲೀಸ್, ಸೈನಿಕರ ಚಿತ್ರದ ಬರೆದು ಅದರೊಂದಿಗೆ ಸೋಪ್ ಹಾಗೂ ಸ್ಯಾನಿಟೈಜರ್ ಚಿತ್ರ ಬರೆದಿದ್ದಾರೆ. ಬಲಭಾಗದಲ್ಲಿ ಮಾಸ್ಕ್, ಲಾಕ್ಡೌನ್ ಇರುವುದರಿಂದ ಆನ್ಲೈನ್ ಪಾಠ ಮಾಡುತ್ತಿರುವ ಟೀಚರ್ ಹಾಗೂ ಜನರಿಗೆ ಸುದ್ದಿ ಮುಟ್ಟಿಸುತ್ತಿರುವ ಮಾಧ್ಯಮದವರನ್ನು ಬಿಡಿಸಿದ್ದಾರೆ. ಮಧ್ಯಭಾಗದಲ್ಲಿ ಅಪ್ಪ, ಅಮ್ಮನೊಂದಿಗೆ ನಿಂತಿರುವ ಹೆಣ್ಣುಮಗುವಿನ ಚಿತ್ರವನ್ನು ಬರೆದು ಸ್ಟೇ ಸೇಫ್, ಸ್ಟೇ ಹೋಂ ಎಂದು ಇಂಗ್ಲೀಷ್ ಅಕ್ಷರಗಳಲ್ಲಿ ಬಿಡಿಸಿದ್ದಾರೆ.
ಆರಾಧ್ಯ ಬರೆದಿರುವ ಈ ಚಿತ್ರವನ್ನು ಅಭಿಮಾನಿಗಳು ಬಹಳ ಇಷ್ಟಪಟ್ಟಿದ್ದಾರೆ. ಐಶ್ವರ್ಯ ರೈ ಮನೆಯಲ್ಲಿದ್ದರೂ ಸೋಷಿಯಲ್ ಮೀಡಿಯಾ ಮುಖಾಂತರ ಜನರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಲು ಯತ್ನಿಸುತ್ತಿದ್ದಾರೆ.