ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಗೂಗಲ್ ಪ್ಲೇ ಸ್ಟೋರ್ನಲ್ಲಿ ಸುಮಾರು 1.5 ಮಿಲಿಯನ್ ಬಾರಿಗಿಂತಲೂ ಹೆಚ್ಚು ಡೌನ್ಲೋಡ್ ಆಗಿರುವ 2 ಆ್ಯಪ್ಗಳು ಚೀನಾದಲ್ಲಿರುವ ಸರ್ವರ್ಗಳಿಗೆ ಬಳಕೆದಾರರ ವೈಯಕ್ತಿಕ ಡೇಟಾ ರವಾನಿಸುತ್ತಿವೆ ಎಂಬುದನ್ನು ಗೂಗಲ್ ಭದ್ರತಾ ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ಆ್ಯಪ್ಗಳು ಫೈಲ್ ಮ್ಯಾನೇಜ್‌ಮೆಂಟ್ ಆ್ಯಪ್ಗಳಾಗಿವೆ ಎಂದು ಗೂಗಲ್ ಹೇಳಿದೆ.
"ನಮ್ಮ ಎಂಜಿನ್ Google Play Store ನಲ್ಲಿ ಅಡಗಿರುವ ಎರಡು ಸ್ಪೈವೇರ್ಗಳನ್ನು ಪತ್ತೆಹಚ್ಚಿದೆ. 1.5 ಮಿಲಿಯನ್ ಬಳಕೆದಾರರ ಮೇಲೆ ಪರಿಣಾಮ ಬೀರಬಹುದಾದ ಆ್ಯಪ್ ಇವಾಗಿವೆ. ಎರಡೂ ಅಪ್ಲಿಕೇಶನ್‌ಗಳು ಒಂದೇ ಡೆವಲಪರ್‌ನಿಂದ ತಯಾರಿಸಲ್ಪಟ್ಟಿವೆ. ಇವು ಫೈಲ್ ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್‌ಗಳಂತೆ ಕಾಣಿಸುತ್ತವೆಯಾದರೂ ಎರಡೂ ಒಂದೇ ರೀತಿಯ ದುರುದ್ದೇಶಪೂರಿತ ನಡವಳಿಕೆಗಳನ್ನು ಹೊಂದಿವೆ" ಎಂದು ಸೈಬರ್ ಸೆಕ್ಯೂರಿಟಿ ಕಂಪನಿ Pradeo ಹೇಳಿದೆ.
"ಬಳಕೆದಾರರು ತಾವಾಗಿಯೇ ಏನನ್ನೂ ಮಾಡದಿದ್ದರೂ ಇವು ತಾವಾಗಿಯೇ ಕೆಲಸ ಮಾಡುತ್ತವೆ ಮತ್ತು ಚೀನಾ ಮೂಲದ ವಿವಿಧ ದುರುದ್ದೇಶಪೂರಿತ ಸರ್ವರ್‌ಗಳ ಕಡೆಗೆ ಬಳಕೆದಾರರ ಸೂಕ್ಷ್ಮ ಡೇಟಾವನ್ನು ಗೌಪ್ಯವಾಗಿ ಕಳುಹಿಸುವಂತೆ ಅವುಗಳನ್ನು ಪ್ರೋಗ್ರಾಮ್ ಮಾಡಲಾಗಿದೆ" ಎಂದು ಅದು ತಿಳಿಸಿದೆ.
ತಾವು ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ಎರಡೂ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ವೆಬ್‌ಸೈಟ್‌ನಲ್ಲಿ ಹೇಳಿವೆ. ಆದಾಗ್ಯೂ ಎರಡೂ ಸ್ಪೈವೇರ್‌ಗಳು ತಮ್ಮ ಬಳಕೆದಾರರ ಬಹಳ ವೈಯಕ್ತಿಕ ಡೇಟಾವನ್ನು ಸಂಗ್ರಹಿಸಿವೆ ಮತ್ತು ಅದನ್ನು ಚೀನಾ ಸೇರಿದಂತೆ ಇತರ ಹಲವಡೆ ಸ್ಥಾಪಿಸಲಾಗಿರುವ ಸರ್ವರ್ಗಳಿಗೆ ರವಾನೆ ಮಾಡುತ್ತಿವೆ ಎಂದು ಭದ್ರತಾ ಸಂಶೋಧಕರು ಬಹಿರಂಗ ಪಡಿಸಿದ್ದಾರೆ.