ವಾಷಿಂಗ್ಟನ್( ಅಮೆರಿಕ): ಇಂಜಿನಿಯರಿಂಗ್, ಭೌತಿಕ ವಿಜ್ಞಾನ ಮತ್ತು ಜೀವ ವಿಜ್ಞಾನಗಳಲ್ಲಿ ಉನ್ನತ ಸಂಶೋಧನೆಗಾಗಿ ಭಾರತೀಯ-ಅಮೆರಿಕನ್ ವಿಜ್ಞಾನಿ ಡಾ. ಸುಬ್ರ ಸುರೇಶ್ ಅವರಿಗೆ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್, ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಪದಕ ಪ್ರದಾನ ಮಾಡಿದರು.
ನ್ಯಾಷನಲ್ ಸೈನ್ಸ್ ಫೌಂಡೇಶನ್‌ನ ಮಾಜಿ ಮುಖ್ಯಸ್ಥ ಸುರೇಶ್, ಬ್ರೌನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಜಿನಿಯರಿಂಗ್‌ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಮಂಗಳವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮೆರಿಕದ ಅಧ್ಯಕ್ಷ ಬೈಡನ್ ಒಂಬತ್ತು ಜನರಿಗೆ ಪ್ರತಿಷ್ಠಿತ ವಿಜ್ಞಾನ ಪದಕಗಳನ್ನು ನೀಡಿ ಗೌರವಿಸಿದರು. ಇಂಜಿನಿಯರಿಂಗ್, ಭೌತಿಕ ವಿಜ್ಞಾನ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿನ ಸಂಶೋಧನೆಗಾಗಿ ಮತ್ತು ವಿಶೇಷವಾಗಿ ವಸ್ತು ವಿಜ್ಞಾನದ ಅಧ್ಯಯನಕ್ಕಾಗಿ ಸುರೇಶ್ ಅವರಿಗೆ ಪದಕ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪದಕಗಳ ಪ್ರತಿಷ್ಠಾನದ ಪ್ರಕಟಣೆಯು ಅಂತಾರಾಷ್ಟ್ರೀಯ ಗಡಿಗಳಲ್ಲಿ ಸಂಶೋಧನೆ ಮತ್ತು ಸಹಯೋಗಕ್ಕಾಗಿ ಸುರೇಶ್ ಅವರ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಅಮೆರಿಕ ಸರ್ಕಾರ ತಮ್ಮ ಕೆಲಸವನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ತುಂಬಾ ಸಂತಸ ಹಾಗೂ ತೃಪ್ತಿ ತಂದಿದೆ ಎಂದು ಸುರೇಶ ಹೇಳಿದ್ದಾರೆ.
ಯಾರು ಈ ಸುರೇಶ್: 1956 ರಲ್ಲಿ ಭಾರತದಲ್ಲಿ ಜನಿಸಿದ ಸುರೇಶ್ ಅವರು 15 ನೇ ವಯಸ್ಸಿನಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದ ಇವರು 25 ನೇ ವಯಸ್ಸಿನ ವೇಳೆಗೆ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಗಳಿಸಿಕೊಂಡಿದ್ದರು. ಕೇವಲ ಎರಡು ವರ್ಷಗಳಲ್ಲಿ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದು ಖ್ಯಾತಿ ಗಳಿಸಿದ್ದಾರೆ. ಸುರೇಶ್ 1983 ರಲ್ಲಿ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಅಧ್ಯಾಪಕರಾಗಿ ಕಿರಿಯ ವಯಸ್ಸಿನಲ್ಲೇ ಸೇವೆಗೆ ಧುಮುಕಿದ್ದರು.
ಬ್ರೌನ್‌ನಲ್ಲಿ 10 ವರ್ಷಗಳ ಸೇವೆ ನಂತರ, ನ್ಯಾಷನಲ್ ಸೈನ್ಸ್ ಫೌಂಡೇಶನ್ (NSF) ಮುನ್ನಡೆಸುವ ಜವಾಬ್ದಾರಿ ಪಡೆದುಕೊಂಡರು. ಅಷ್ಟೇ ಅಲ್ಲ ಈ ಪೌಂಡೇಶನ್ ನಡೆಸಿಕೊಂಡು ಹೋಗುವ ಜವಾಬ್ದಾರಿ ಪಡೆದ ಮೊದಲ ಏಷ್ಯನ್-ಸಂಜಾತ ಅಮೆರಿಕನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡರು. ಆಗಿನ ಅಧ್ಯಕ್ಷ ಬರಾಕ್ ಒಬಾಮ ಅವರು ಈ ಸ್ಥಾನಕ್ಕೆ ಸುರೇಶ್ ಅವರನ್ನು ನಾಮನಿರ್ದೇಶನ ಮಾಡಿದ್ದರು. ಈ ಮೂಲಕ ನ್ಯಾಷನಲ್ ಸೈನ್ಸ್ ಫೌಂಡೇಶನ್ 13 ನೇ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಈ ಸೇವೆ ಪೂರ್ಣಗೊಂಡ ಬಳಿಕ ಕಳೆದ ಸೆಪ್ಟೆಂಬರ್ 2023 ರಲ್ಲಿ ಬ್ರೌನ್ಸ್ ಸ್ಕೂಲ್ ಆಫ್ ಇಂಜಿನಿಯರಿಂಗ್‌ಗೆ ಮರಳಿದ್ದಾರೆ,
ಸುರೇಶ್ NSF ಆಡಳಿತಾವಧಿಯಲ್ಲಿ ಗ್ಲೋಬಲ್ ರಿಸರ್ಚ್ ಕೌನ್ಸಿಲ್ ಪ್ರಾರಂಭಿಸಲಾಯಿತು. ಇದು 50 ಕ್ಕೂ ಹೆಚ್ಚು ದೇಶಗಳ ವಿಜ್ಞಾನ ಮತ್ತು ಎಂಜಿನಿಯರಿಂಗ್ ನಿಧಿಸಂಸ್ಥೆಗಳ ಮುಖ್ಯಸ್ಥರ ವರ್ಚುವಲ್ ಸಂಸ್ಥೆಯಾಗಿದ್ದು, ಜಾಗತಿಕ ಸಹಯೋಗ ಮತ್ತು ಡೇಟಾ ಹಂಚಿಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.
ಇನ್ನೊಬ್ಬ ವಿಜ್ಞಾನಿ ಗಾಡ್ಗಿಲ್ಗೆ ಶ್ವೇತಭವನದ ಪ್ರತಿಷ್ಠಿತ ರಾಷ್ಟ್ರೀಯ ಪದಕ:ವಿಶ್ವದಾದ್ಯಂತ ಸಮುದಾಯಗಳಿಗೆ ಜೀವನಾಧಾರಿತ ಸಂಪನ್ಮೂಲಗಳನ್ನು ಒದಗಿಸಿದ್ದಕ್ಕಾಗಿ ಮತ್ತೊಬ್ಬ ಭಾರತೀಯ ಅಮೆರಿಕನ್ ವಿಜ್ಞಾನಿ ಅಶೋಕ್ ಗಾಡ್ಗಿಲ್ ಅವರಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಶ್ವೇತಭವನದ ಪ್ರತಿಷ್ಠಿತ ರಾಷ್ಟ್ರೀಯ ಪದಕವನ್ನು ಪ್ರದಾನ ಮಾಡಿದರು. ಅಮೆರಿಕದ ಪ್ರಮುಖ ನವೋದ್ಯಮಿಗಳಿಗೆ ನೀಡಲಾಗುವ ಪ್ರಶಸ್ತಿ ಇದಾಗಿದ್ದು, ಅಮೆರಿಕದ ಸ್ಪರ್ಧಾತ್ಮಕತೆ ಮತ್ತು ಜೀವನದ ಗುಣಮಟ್ಟಕ್ಕೆ ಶಾಶ್ವತ ಕೊಡುಗೆ ನೀಡಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಗಾಡ್ಗೀಲ್ ಈ ಪದಕ ಪಡೆದ 12 ಪುರಸ್ಕೃತರಲ್ಲಿ ಒಬ್ಬರಾಗಿದ್ದಾರೆ.
ಏನಿವರ ಕೊಡುಗೆ?: ಅಂದಹಾಗೆ, ಗಾಡ್ಗಿಲ್ ಅವರು UC ಬರ್ಕ್ಲಿಯಲ್ಲಿ ಸಿವಿಲ್ ಮತ್ತು ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್‌ನಲ್ಲಿ ಗೌರವಾನ್ವಿತ ಪ್ರೊಫೆಸರ್ ಆಗಿದ್ದಾರೆ, ಸುರಕ್ಷಿತ ಕುಡಿಯುವ ನೀರಿನ ತಂತ್ರಜ್ಞಾನಗಳು, ಶಕ್ತಿ-ಸಮರ್ಥ ಸ್ಟೌವ್ಗಳು ಮತ್ತು ದಕ್ಷ ವಿದ್ಯುತ್ ದೀಪಗಳನ್ನು ಮಾಡುವ ವಿಧಾನಗಳು ಸೇರಿದಂತೆ ಅಭಿವೃದ್ಧಿಶೀಲ ಪ್ರಪಂಚದ ಕೆಲವು ಪರಿಹರಿಸಲಾಗದ ಸಮಸ್ಯೆಗಳಿಗೆ ಕಡಿಮೆ - ವೆಚ್ಚದ ಪರಿಹಾರಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಜನರಿಗೆ ಕೈಗೆಟಕುವ ಮೂಲ ಸವಲತ್ತುಗಳನ್ನು ಒದಗಿಸಲು ನೆರವಾಗಿದ್ದಾರೆ, ಅವರ ಆವಿಷ್ಕಾರಗಳನ್ನು ಗುರುತಿಸಿ ಅಮೆರಿಕ ಸರ್ಕಾರ ಈ ಪ್ರತಿಷ್ಠಿತ ಗೌರವ ನೀಡಿದೆ.
ಇದನ್ನು ಓದಿ:ಮಧುಮೇಹಿಗಳ ಗಾಯ 3 ಪಟ್ಟು ಬೇಗ ಗುಣಪಡಿಸುವ ಜೆಲ್ ಆವಿಷ್ಕಾರ