ಬಾಲ್ಟಿಮೋರ್( ಅಮೆರಿಕ): ಎರಡು ತಿಂಗಳ ಹಿಂದೆ ಹಂದಿ ಹೃದಯ ಕಸಿಗೊಳಗಾಗಿದ್ದ ಮೊದಲ ವ್ಯಕ್ತಿ ಅಮೆರಿಕದ ಡೇವಿಡ್ ಬೆನೆಟ್ (57) ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದಲ್ಲಿ ಮಂಗಳವಾರ ನಿಧನರಾಗಿದ್ದಾರೆ ಎಂದು ಮೇರಿಲ್ಯಾಂಡ್ ಆಸ್ಪತ್ರೆ ಬುಧವಾರ ಈ ಸುದ್ದಿಯನ್ನ ಪ್ರಕಟಿಸಿದೆ.
ಮಾನವನಿಗೆ ಹಂದಿ ಹೃದಯವನ್ನು ಕಸಿ ಮಾಡುವ ಅದ್ಭುತ ಪ್ರಯೋಗವೊಂದು ಎಲ್ಲೆಡೆಯೂ ಸುದ್ದಿಯಾದದ್ದು ನೆನಪೇ ಇದೆ. ಆ ವ್ಯಕ್ತಿ ಹೃದಯ ಕಸಿ ಮಾಡಿದ ಎರಡು ತಿಂಗಳ ನಂತರ ಸಾವನ್ನಪ್ಪಿದ್ದಾರೆ. ಆದರೆ, ವೈದ್ಯರು ಅವರ ಸಾವಿಗೆ ನಿಖರವಾದ ಕಾರಣವನ್ನು ನೀಡಿಲ್ಲ. ತುಂಬಾ ದಿನಗಳ ಹಿಂದೆಯ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂದು ಆಸ್ಪತ್ರೆ ತಿಳಿಸಿದೆ.
ಆರಂಭದಲ್ಲಿ ಕಸಿ ಮಾಡಿದ ಹಂದಿ ಹೃದಯ ಕೆಲಸ ಮಾಡುತ್ತಿತ್ತು. ಬೆನೆಟ್ ಅವರು ಚೇತರಿಸಿಕೊಳ್ಳುತ್ತಿರುವುದನ್ನೂ ಆಸ್ಪತ್ರೆ ಗಮನಿಸಿತ್ತು. ಬೆನೆಟ್ ಚಟುವಟಿಕೆ ಕುರಿತು ತಿಂಗಳ ಹಿಂದೆ ಆಸ್ಪತ್ರೆ ವಿಡಿಯೋವೊಂದನ್ನು ಸಹ ಬಿಡುಗಡೆ ಮಾಡಿತ್ತು. 1984ರಲ್ಲಿ ಕ್ಯಾಲಿಫೋರ್ನಿಯಾದ ಸಾವಿನಂಚಿನಲ್ಲಿದ್ದ ಮಗುವಿಗೆ ಬಬೂನ್ ಹೃದಯದ ಕಸಿ ಮಾಡಲಾಗಿತ್ತು. ಆ ಮಗು 21 ದಿನಗಳ ಕಾಲ ಬದುಕಿತ್ತು. ಬೆನೆಟ್ ಅವರಿಗೆ ಮಾಡಿದ ಹಂದಿ ಹೃದಯ ಕಸಿ ಚಿಕಿತ್ಸೆ ಮತ್ತು ಅವರು ಚೇತರಿಸಿಕೊಂಡ ರೀತಿ ಕ್ಸೆನಾಟ್ರಾನ್ಸ್ಪ್ಲಾಂಟೇಶನ್ನಲ್ಲಿ ಹಿಂದೆ ಇದ್ದ ದಾಖಲೆಯನ್ನು ಮುರಿದು ಮೈಲಿಗಲ್ಲು ಸಾಧಿಸಿದೆ.
ಡೇವಿಡ್ ಬೆನೆಟ್ ಅವರ ಮಗ, ಆಸ್ಪತ್ರೆಯ ಈ ಪ್ರಯೋಗವನ್ನು ಶ್ಲಾಘಿಸಿದ್ದು, ಇದು ಅಂಗಾಂಗದ ಕೊರತೆಯನ್ನು ನೀಗಿಸುವಲ್ಲಿ ಸಹಾಯಕವಾಗಲಿದೆ. ವೈದ್ಯರ ಈ ಐತಿಹಾಸಿಕ ಪ್ರಯತ್ನಕ್ಕೆ ನಾವು ಋಣಿಯಾಗಿದ್ದೇವೆ. ಇದು ಅಂತ್ಯವಲ್ಲ, ಹೊಸ ಭರವಸೆಯ ಆರಂಭವಾಗಿರಬಹುದು. ಹೃದಯ ಕಸಿ ಮಾಡಿದ ಸಂದರ್ಭ ತಂದೆಯ ಹೃದಯ ಕೆಲಸ ಮಾಡುವ ಭರವಸೆಯೇ ಇರಲಿಲ್ಲ. ಯಾಕೆಂದರೆ ಮಾನವನ ದೇಹ ಪ್ರಾಣಿಗಳ ಅಂಗಾಂಗಗಳನ್ನು ಆದಷ್ಟು ಬೇಗ ತಿರಸ್ಕರಿಸಿಬಿಡುತ್ತವೆ. ಹಿಂದಿನ ಹಲವಾರು ಪ್ರಯೋಗಗಳು ವಿಫಲವಾಗಿವೆ. ಆದರೆ, ಇಲ್ಲಿನ ವೈದ್ಯರು ಮಾನವನ ದೇಹ ಪ್ರಾಣಿಗಳ ಅಂಗಾಂಗಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಮಾನವನ ಜೀನ್ಗಳನ್ನು ಸೇರಿಸಿ, ಚಿಕಿತ್ಸೆ ಕೈಗೊಂಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.