ಲೀಸೆಸ್ಟರ್ (ಇಂಗ್ಲೆಂಡ್): ನಾವು ನಮ್ಮ ಸ್ಮಾರ್ಟ್ಫೋನ್ ತೆಗೆದುಕೊಂಡು ಹೋಗದ ಜಾಗವೇ ಇಲ್ಲದಂತಾಗಿದೆ. ಮಲಗುವಾಗ, ಬೆಳಗ್ಗೆ ಎದ್ದ ತಕ್ಷಣ ಬಾತ್ರೂಮಿಗೆ ಹೋಗುವಾಗ ಹೀಗೆ ಎಲ್ಲ ಕಡೆಗೂ ನಾವು ನಮ್ಮ ಫೋನ್ ಹಿಡಿದುಕೊಂಡಿರುತ್ತೇವೆ. ವಿಶ್ವದ ಶೇ 90 ರಷ್ಟು ಜನ ಬೆಳಗ್ಗೆ ಎದ್ದ ತಕ್ಷಣ ನೋಡುವುದೇ ಫೋನನ್ನು. ಆದರೆ, ಹೀಗೆ ಎಲ್ಲ ಕಡೆಗೂ ಫೋನ್ ಬಳಸುವುದರಿಂದ ಸೂಕ್ಷ್ಮಾಣುಗಳಿಂದ ನಮಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.
2019 ರ ಸಮೀಕ್ಷೆಯ ಪ್ರಕಾರ ಬ್ರಿಟನ್ನಲ್ಲಿ ಬಹುತೇಕ ಜನರು ತಮ್ಮ ಫೋನ್‌ಗಳನ್ನು ಟಾಯ್ಲೆಟ್‌ನಲ್ಲಿ ಬಳಸುತ್ತಾರೆ ಎಂದು ಕಂಡು ಬಂದಿದೆ. ಹಾಗಾಗಿ ನಮ್ಮ ಮೊಬೈಲ್ ಫೋನ್‌ಗಳು ಟಾಯ್ಲೆಟ್ ಸೀಟ್‌ಗಳಿಗಿಂತ ಹೆಚ್ಚು ಕೊಳಕಾಗಿರುತ್ತವೆ ಎಂದು ಅಧ್ಯಯನಗಳು ಕಂಡು ಹಿಡಿದಿರುವುದು ಆಶ್ಚರ್ಯವೇನಲ್ಲ. ನಾವು ನಮ್ಮ ಫೋನ್‌ಗಳನ್ನು ಮಕ್ಕಳಿಗೆ ಆಟವಾಡಲು ನೀಡುತ್ತೇವೆ. ಫೋನ್‌ಗಳನ್ನು ಬಳಸುತ್ತ ಅದೇ ಸಮಯಕ್ಕೆ ತಿನ್ನುತ್ತಿರುತ್ತೇವೆ. ಅವುಗಳನ್ನು ಎಲ್ಲ ರೀತಿಯ ಕೊಳಕು ಮೇಲ್ಮೈಗಳಲ್ಲಿ ಇಡುತ್ತೇವೆ. ಇವುಗಳೆಲ್ಲವೂ ಸೂಕ್ಷ್ಮಜೀವಿಗಳನ್ನು ನಿಮ್ಮ ಫೋನ್‌ಗೆ ವರ್ಗಾಯಿಸಬಹುದು. ಜೊತೆಗೆ ಆ ಸೂಕ್ಷ್ಮಜೀವಿಗಳಿಗೆ ತಿನ್ನಲು ಆಹಾರವನ್ನು ಕೂಡ ನಿಮ್ಮ ಫೋನ್‌ಗೆ ವರ್ಗಾಯಿಸಬಹುದು.
ಒಂದು ಅಂದಾಜಿನ ಪ್ರಕಾರ ಜನರು ದಿನಕ್ಕೆ ಸಾವಿರಾರು ಬಾರಿ ಅಲ್ಲದಿದ್ದರೂ ನೂರಾರು ಬಾರಿ ತಮ್ಮ ಫೋನ್ ಅನ್ನು ಸ್ಪರ್ಶಿಸುತ್ತಾರೆ. ನಮ್ಮಲ್ಲಿ ಅನೇಕರು ಬಾತ್‌ರೂಮ್‌ಗೆ ಹೋಗಿ ಬಂದ ನಂತರ, ಅಡುಗೆ ಮಾಡಿದ ನಂತರ, ಶುಚಿಗೊಳಿಸುವಿಕೆಯ ನಂತ ಅಥವಾ ತೋಟಗಾರಿಕೆಯ ಕೆಲಸದ ನಂತರ ಕೈಗಳನ್ನು ತೊಳೆಯುತ್ತೇವೆ. ಆದರೆ ನಮ್ಮ ಫೋನ್‌ಗಳನ್ನು ಸ್ಪರ್ಶಿಸಿದ ನಂತರ ಯಾರೇ ಆದರೂ ತಮ್ಮ ಕೈಗಳನ್ನು ತೊಳೆದುಕೊಳ್ಳುವುದು ಬಹಳ ಕಡಿಮೆ. ಆದರೆ ಫೋನ್‌ಗಳು ಎಷ್ಟು ಕೊಳಕು ಹಾಗೂ ಅಪಾಯಕಾರಿಯಾದ ಸೂಕ್ಷ್ಮಾಣುಗಳನ್ನು ಹೊಂದಿರುತ್ತವೆ ಎಂಬುದನ್ನು ನೋಡಿದರೆ ಬಹುಶಃ ಇದು ಮೊಬೈಲ್ ಫೋನ್ ನೈರ್ಮಲ್ಯದ ಬಗ್ಗೆ ಹೆಚ್ಚು ಯೋಚಿಸುವ ಸಮಯವಾಗಿದೆ.
ಸೋಂಕು ಹರಡುವ ಮಾಧ್ಯಮವಾಗಬಹುದು ಎಚ್ಚರ:ನಮ್ಮ ಕೈಗಳಿಗೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಆಗಾಗ ಅಂಟಿಕೊಳ್ಳುತ್ತಿರುತ್ತವೆ ಮತ್ತು ಈ ಮೂಲಕ ಅವು ಸೋಂಕು ಹರಡುವ ಮಾರ್ಗಗಳಾಗಿವೆ. ನಾವು ಸ್ಪರ್ಶಿಸುವ ಫೋನ್‌ಗಳು ಕೂಡ ಹಾಗೆಯೇ. ಮೊಬೈಲ್ ಫೋನ್‌ಗಳ ಮೇಲೆ ಸೂಕ್ಷ್ಮಾಣುಜೀವಿಗಳು ಜಮೆಯಾಗುವ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ. ವಿವಿಧ ರೀತಿಯ ಸಂಭಾವ್ಯ ರೋಗಕಾರಕ ಬ್ಯಾಕ್ಟೀರಿಯಾಗಳು ಮೊಬೈಲ್ ಫೋನ್ ಮೇಲಿರುತ್ತವೆ ಎಂಬುದು ಈ ಅಧ್ಯಯನಗಳಲ್ಲಿ ಕಂಡು ಬಂದಿದೆ.