ಸ್ಯಾನ್ ಡಿಯೆಗೊ (ಕ್ಯಾಲಿಫೋರ್ನಿಯಾ) : ಮಾನವನ ಮೆದುಳು ವಿಷಯಗಳನ್ನು ಯಾವ ರೀತಿಯಲ್ಲಿ ಗ್ರಹಿಸುತ್ತದೆಯೋ ಅದೇ ರೀತಿಯಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ -ಎಐ) ತಂತ್ರಜ್ಞಾನ ಕೂಡ ಮಾಹಿತಿಗಳನ್ನು ಗ್ರಹಿಸಿ ಅರ್ಥ ಮಾಡಿಕೊಳ್ಳುತ್ತದೆ ಎಂಬುದನ್ನು ಬರ್ಕ್ ಲೀ ಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ. ಎಐ ವ್ಯವಸ್ಥೆಯ ಬ್ಲ್ಯಾಕ್ ಬಾಕ್ಸ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ಈ ಸಂಶೋಧನೆ ಬಹಳ ಮಹತ್ವದ್ದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬರ್ಕ್ಲೀ ಸ್ಪೀಚ್ ಅಂಡ್ ಕಂಪ್ಯೂಟೇಶನ್ ಲ್ಯಾಬ್‌ನ ಸಂಶೋಧಕರು ನಡೆಸಿದ ಪ್ರಯೋಗ ಹೀಗಿತ್ತು: ಸಂಶೋಧನೆಯಲ್ಲಿ ಪಾಲ್ಗೊಂಡಿದ್ದವರ ತಲೆಯ ಮೇಲೆ ಎಲೆಕ್ಟ್ರೋಡ್ಗಳನ್ನು ಅಳವಡಿಸಲಾಗಿತ್ತು. ಅವರಿಗೆ bah ಎಂಬ ಒಂದೇ ಒಂದು ಶಬ್ದವನ್ನು ಕೇಳಿಸಿದಾಗ ಅವರ ಮೆದುಳಿನ ತರಂಗಗಳನ್ನು ದಾಖಲಿಸಲಾಯಿತು. ಇದೇ ರೀತಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಎಐ ತಂತ್ರಜ್ಞಾನ ವ್ಯವಸ್ಥೆಗೆ ಇದೇ ಶಬ್ದವನ್ನು ಕೇಳಿಸಲಾಯಿತು ಹಾಗೂ ಅದರ ಪ್ರತಿಕ್ರಿಯೆಯ ಅಲೆಗಳನ್ನು ದಾಖಲಿಸಲಾಯಿತು. ನಂತರ ಎರಡನ್ನೂ ಹೋಲಿಸಿ ನೋಡಿದಾಗ, ಎರಡೂ ಅಲೆಗಳ ವಿನ್ಯಾಸಗಳು ಬಹುತೇಕ ಒಂದೇ ರೀತಿಯದ್ದಾಗಿದ್ದವು.
ಈ ಬಗ್ಗೆ ಮಾತನಾಡಿದ ಸಂಶೋಧನಾ ವರದಿಯ ಪ್ರಮುಖ ಲೇಖಕರಾದ ಗಾಸ್ಪರ್ ಬೇಗಸ್, ಎರಡೂ ಆಕಾರಗಳು ಆಶ್ಚರ್ಯಕರ ಎನಿಸುವಷ್ಟು ಒಂದೇ ರೀತಿಯಾಗಿವೆ, ಎರಡೂ ವ್ಯವಸ್ಥೆಗಳು ಒಂದು ವಿಷಯವನ್ನು ಎನ್ಕೋಡ್ ಮಾಡುವ ವಿಧಾನಗಳು ಒಂದೇ ರೀತಿಯಾಗಿವೆ ಎಂಬುದನ್ನು ಇದು ತೋರಿಸುತ್ತದೆ ಎಂದರು. ಗಾಸ್ಪರ್ ಬೇಗಸ್ ಬರ್ಕ್ಲೀ ವಿಶ್ವ ವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಹಾಗೂ Scientific Reports ಹೆಸರಿನ ಜರ್ನಲ್ನಲ್ಲಿ ಪ್ರಕಟವಾದ ಈ ವರದಿಯ ಲೇಖಕರೂ ಆಗಿದ್ದಾರೆ.