ವಾಷಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೋಮವಾರ ಚಂದ್ರನತ್ತ ಮತ್ತೊಂದು ಬಾಹ್ಯಾಕಾಶ ನೌಕೆ ಉಡಾವಣೆ ಮಾಡುವ ಮೂಲಕ 2024ರ ಹೊಸ ವರ್ಷವನ್ನು ಆರಂಭಿಸಲಿದೆ. ಸೋಮವಾರ ಆಸ್ಟ್ರೋಬೋಟಿಕ್ನ ಪೆರೆಗ್ರಿನ್ ಲ್ಯಾಂಡರ್ ಆಗಿರುವ, ಆಸ್ಟ್ರೋಬೋಟಿಕ್ ಪೆರೆಗ್ರಿನ್ ಮಿಷನ್ ಒನ್ ಎಂದು ಹೆಸರಿಸಲಾಗಿರುವ ಬಾಹ್ಯಾಕಾಶ ನೌಕೆಯ ಮೂಲಕ ಐದು ಪೇಲೋಡ್ಗಳನ್ನು ಚಂದ್ರನ ಮೇಲೆ ಕಳುಹಿಸಲು ನಾಸಾ ಸಜ್ಜಾಗಿದೆ. 2018 ರಲ್ಲಿ ಪ್ರಾರಂಭವಾದ ಸಿಎಲ್ಪಿಎಸ್ ಉಪಕ್ರಮದ ಮೂಲಕ ನಾಸಾ ಪೇಲೋಡ್ಗಳನ್ನು ಚಂದ್ರನ ಮೇಲೆ ಸಾಗಿಸಲು ಅರ್ಹವಾದ 14 ಕಂಪನಿಗಳ ಪೈಕಿ ಆಸ್ಟ್ರೋಬೋಟಿಕ್ ಕೂಡ ಒಂದಾಗಿದೆ.
ನಾಸಾದ ಸಿಎಲ್ಪಿಎಸ್ (ಕಮರ್ಷಿಯಲ್ ಲೂನಾರ್ ಪೇಲೋಡ್ ಸರ್ವೀಸಸ್) ಉಪಕ್ರಮದ ಅಡಿಯಲ್ಲಿ ಫ್ಲೋರಿಡಾದ ಕೇಪ್ ಕೆನವೆರಾಲ್ನಿಂದ ಯುನೈಟೆಡ್ ಲಾಂಚ್ ಅಲೈಯನ್ಸ್ ವಲ್ಕನ್ ರಾಕೆಟ್ ಮೂಲಕ ನೌಕೆ ಉಡಾವಣೆಯಾಗಲಿದೆ.
ನಾಸಾ ಪೇಲೋಡ್ಗಳು ಚಂದ್ರನ ಮೇಲೆ ನೀರಿನ ಅಣುಗಳನ್ನು ಪತ್ತೆಹಚ್ಚುವ, ಲ್ಯಾಂಡರ್ ಸುತ್ತಲಿನ ವಿಕಿರಣ ಮತ್ತು ಅನಿಲಗಳನ್ನು ಅಳೆಯುವ ಮತ್ತು ಚಂದ್ರನ ಬಾಹ್ಯಗೋಳವನ್ನು (ಚಂದ್ರನ ಮೇಲ್ಮೈಯಲ್ಲಿರುವ ಅನಿಲಗಳ ತೆಳುವಾದ ಪದರ) ಮೌಲ್ಯಮಾಪನ ಮಾಡುವ ಗುರಿಯನ್ನು ಹೊಂದಿವೆ. ಈ ಸಂಶೋಧನೆಗಳು ಸೌರ ವಿಕಿರಣವು ಚಂದ್ರನ ಮೇಲ್ಮೈಯೊಂದಿಗೆ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ನಮ್ಮ ತಿಳುವಳಿಕೆಯನ್ನು ಸುಧಾರಿಸುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.