ಸ್ಯಾನ್ ಫ್ರಾನ್ಸಿಸ್ಕೋ: ಅನೇಕ ಮಂದಿ ಕಾಯುತ್ತಿದ್ದ ಮೆಟಾ ಸಂಸ್ಥಾಪಕ ಮಾರ್ಕ್ ಜುಗರ್ಬರ್ಗ್ ಮತ್ತು ಎಕ್ಸ್ ಮಾಲೀಕ ಎಲೋನ್ ಮಸ್ಕ್ ಅವರ ಕೇಜ್ ಫೈಟ್ ಸದ್ಯ ನಡೆಯುವುದಿಲ್ಲ. ಇದಕ್ಕೆ ಕಾರಣ ಮೆಟಾ ಸಂಸ್ಥಾಪಕ ತರಬೇತಿ ವೇಳೆ ಗಾಯಗೊಂಡಿದ್ದು, ಇದೀಗ ಸರ್ಜರಿಗೆ ಒಳಗಾಗುತ್ತಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಮಾರ್ಕ್ ಜುಗರ್ಬರ್ಗ್, ತಮ್ಮ ಎಸಿಎಲ್ (ಅಂಟಿರಿಯರ್ ಕ್ರೂಸಿಯೇಟ್ ಲಿಗಮೆಂಟ್) ಹಾನಿಯಾಗಿದ್ದು, ಅದನ್ನು ಬದಲಾಯಿಸುವ ಅವಶ್ಯಕತೆ ಎದುರಾಗಿದೆ. ಈ ಹಿನ್ನೆಲೆ ಶಸ್ತ್ರ ಚಿಕಿತ್ಸೆ ಮೊರೆ ಹೋಗಿರುವುದಾಗಿ ಎಂದು ತಿಳಿಸಿದ್ದಾರೆ.
ಮಾರ್ಕ್ ಅವರು ಮಿಶ್ರ ಮಾರ್ಷಲ್ ಆರ್ಟ್ಸ್ (ಎಂಎಂಎ) ಪಂದ್ಯದ ಸ್ಪರ್ಧೆಗಾಗಿ ತಯಾರಿ ನಡೆಸುತ್ತಿರುವ ವೇಳೆ ಈ ಅನಾಹುತ ಸಂಭವಿಸಿದೆ.
ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲೂ ತಿಳಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಎಂಎಂಎ ಫೈಟ್ ಸ್ಪರ್ಧೆಗೆ ತರಬೇತಿ ಪಡೆಯುತ್ತಿದ್ದೆ. ಆದರೆ ಇದೀಗ ಅದು ವಿಳಂಬವಾಗಿದೆ. ಹುಷಾರಾದ ಬಳಿಕ ಮತ್ತೆ ತರಬೇತಿ ಆರಂಭಿಸುವ ನಿರೀಕ್ಷೆಯಲ್ಲಿದ್ದೇನೆ. ನನಗೆ ಪ್ರೀತಿ ಮತ್ತು ಬೆಂಬಲ ತೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಮೆಟಾ ಸಿಇಒ ತಿಳಿಸಿದ್ದಾರೆ.
ಅವರ ಈ ಪೋಸ್ಟ್ಗೆ ಬೆಂಬಲಿಗರು ಬೇಗ ಗುಣಮುಖರಾಗುವಂತೆ ಶುಭ ಹಾರೈಸಿದ್ದಾರೆ. ಈ ರೀತಿಯ ಗಂಭೀರ ಗಾಯಗಳಿಂದ ಗುಣಮುಖವಾಗಲು ವೃತ್ತಿಪರ ಅಥ್ಲೀಟ್ಗಳಿಗೆ ವರ್ಷಗಳ ಕಾಲ ಸಮಯ ಬೇಕಾಗುತ್ತದೆ.
ಸ್ಪರ್ಧೆಗಾಗಿ ನಿರಂತರ ತರಬೇತಿ ನಡೆಸಿರುವ ಜುಕರ್ ಬರ್ಗ್ ಕಳೆದ ತಿಂಗಳು ಕೂಡ ತಮ್ಮ ಉಬ್ಬಿದ ಮುಖ, ಕಣ್ಣು ಮತ್ತು ಮೂಗಿನ ಬಳಿ ಗಾಯಗೊಂಡಿರುವ ಸೆಲ್ಫಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಕುರಿತು ಬೆಂಬಲಿಗರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಯುದ್ಧ ಕ್ರೀಡೆಗಳಲ್ಲಿ ಸಾಮಾನ್ಯ ತರಬೇತಿ ವೇಳೆ ಈ ರೀತಿ ಆಗಿದೆ ಎಂದಿದ್ದರು. ಕೊಂಚ ಮೈಮರೆತ ಕ್ಷಣದಿಂದ ಆದ ಅವಾಂತರ. ಈ ಹಿನ್ನೆಲೆ ನನ್ನನ್ನು ಹೊಸ ಅವತಾರದಲ್ಲಿ ಕಾಣಬೇಕಿದೆ ಎಂದಿದ್ದರು.
ಜುಕರ್ಬರ್ಗ್ ಎಂಎಂಎ ಮತ್ತು ಜಿಯು ಜಿಟ್ಸುನಂತಹ ಯುದ್ಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಕ್ಸ್ ಮಾಲೀಕ ಮಸ್ ಕೇಜ್ ಫೈಟ್ ಸವಾಲಿನ ಬಳಿಕ ಇದರ ತರಬೇತಿಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ.
ಕಳೆದ ಜೂನ್ನಲ್ಲಿ ಮೆಟಾ ಶೀಘ್ರದಲ್ಲೇ ಟ್ವಿಟರ್ಗೆ ಪ್ರತಿಸ್ಪರ್ಧಿ ನೀಡಲಿದೆ ಎಂಬ ವಿಷಯದಿಂದ ಟೆಕ್ ದಿಗ್ಗಜರ ನಡುವೆ ಈ ಕೇಜ್ ಫೈಟ್ ಸುದ್ದಿ ಆರಂಭವಾಯಿತು. ಮಸ್ಕ್ ಜುಗರ್ ಬರ್ಗ್ಗೆ ಕೇಜ್ ಮ್ಯಾಚ್ಗೆ ಆಹ್ವಾನಿಸಿದ್ದರು, ಇದಕ್ಕೆ ಸುಮ್ಮನಿರದ ಮೆಟಾ ಸಿಇಒ ಮಸ್ಕ್ಗೆ ವಿಳಾಸವನ್ನು ಕಳುಹಿಸಿ ಎಂದು ಪೋಸ್ಟ್ ಮಾಡಿದ್ದರು. ಅಲ್ಲದೇ ಆಗಸ್ಟ್ನಲ್ಲಿ ಇಟಲಿಯಲ್ಲಿ ಈ ಕೇಜ್ ಫೈಟ್ ನೇರ ಪ್ರಸಾರ ಆಗಲಿದೆ ಎಂದು ಮಸ್ಕ್ ತಿಳಿಸಿದ್ದರು.
ಪ್ರೊಫೆಸರ್ ಡೇವ್ ಕ್ಯಾಮರಿಲ್ಲೊ ಅವರಿಂದ ಜಿ ಜುಟ್ಸು ತರಬೇತಿ ಪಡೆಯುತ್ತಿರುವ ಜುಕರ್ಬರ್ಗ್ ಇತ್ತೀಚಿಗೆ ನೀಲಿ ಬೆಲ್ಟ್ ಅನ್ನು ಪಡೆದಿದ್ದರು. (ಐಎಎನ್ಎಸ್)
ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ಎಂಬ ವಿನಾಶಕಾರಿ ಶಕ್ತಿ ಎಲ್ಲಾ ಕೆಲಸಗಳನ್ನೂ ಕಸಿದುಕೊಳ್ಳಬಹುದು: ಎಲೋನ್ ಮಸ್ಕ್