ಮಾಸ್ಕೋ: 47 ವರ್ಷಗಳ ಬಳಿಕ ರಷ್ಯಾ ತನ್ನ ಲೂನಾ-25 ಲ್ಯಾಂಡರ್ ಮಿಷನ್ ಮೂಲಕ ಮತ್ತೆ ಚಂದ್ರನತ್ತ ಮುಖ ಮಾಡಿದೆ. ರಷ್ಯಾದ ವೊಸ್ಟೊಚ್ನಿ ಉಡಾವಣಾ ಕೇಂದ್ರದಿಂದ ಲೂನಾ -25 ಬಾಹ್ಯಾಕಾಶ ನೌಕೆಯು ಮಾಸ್ಕೋ ಸಮಯ ಶುಕ್ರವಾರ ಮುಂಜಾನೆ 2:10 ಕ್ಕೆ (ಐಎಸ್ಟಿ ಕಾಲಮಾನ ಬೆಳಗ್ಗೆ 4:40) ಸೋಯುಜ್ -2.1 ಬಿ ರಾಕೆಟ್ ಮೂಲಕ ನಭಕ್ಕೆ ಹಾರಿದೆ.
ಈ ಹಿಂದೆ ಇದ್ದ ಸೋವಿಯತ್ ಒಕ್ಕೂಟದ ಅವಧಿಯಲ್ಲಿ ರಷ್ಯಾದ ಕೊನೆಯ ಚಂದ್ರಯಾನ ಲೂನಾ -24 ಅನ್ನು 1976 ರಲ್ಲಿ ಉಡಾವಣೆ ಮಾಡಲಾಗಿತ್ತು. ಇದು ಸುಮಾರು 170 ಗ್ರಾಂ ಚಂದ್ರನ ಮಾದರಿಗಳನ್ನು ಸಂಗ್ರಹಿಸಿ ಯಶಸ್ವಿಯಾಗಿ ಭೂಮಿಗೆ ತಲುಪಿಸಿತ್ತು.
ಪ್ರಸ್ತುತ ರಷ್ಯಾ ಹಾರಿಸಿದ ಲೂನಾ -25 ನೌಕೆ ಆಗಸ್ಟ್ 16 ರಂದು ಚಂದ್ರನ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ. ಚಂದ್ರನ ಬೋಗುಸ್ಲಾವ್ಸ್ಕಿ (Boguslawsky crater) ಕುಳಿಯ ಪ್ರದೇಶವನ್ನು ಸ್ಪರ್ಶಿಸುವ ಮೊದಲು ಲೂನಾ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಿಂದ ಸುಮಾರು 100 ಕಿಮೀ ಎತ್ತರದಲ್ಲಿ ಮೂರರಿಂದ ಏಳು ದಿನಗಳವರೆಗೆ ಸುತ್ತಲಿದೆ. ಮ್ಯಾಂಜಿನಸ್ ಮತ್ತು ಪೆಂಟ್ಲ್ಯಾಂಡ್-ಎ ಕುಳಿಗಳನ್ನು ಪರ್ಯಾಯ ಲ್ಯಾಂಡಿಂಗ್ ತಾಣಗಳಾಗಿ ಗುರುತಿಸಲಾಗಿದೆ.
ಲೂನಾ -25 ಸುರಕ್ಷಿತವಾಗಿ ಇಳಿದ ನಂತರ ಚಂದ್ರನ ಮೇಲ್ಮೈಯಲ್ಲಿ ಕನಿಷ್ಠ ಒಂದು ಭೂಮಿಯ ವರ್ಷದಷ್ಟು ಕಾಲ ಕೆಲಸ ಮಾಡುವ ಗುರಿಯನ್ನು ಹೊಂದಿದೆ. ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಿಸುವುದು ಇದರ ಪ್ರಮುಖ ಗುರಿಯಾಗಿದೆ. ಈ ಮಿಷನ್ ಯಶಸ್ವಿಯಾದರೆ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ಬಾಹ್ಯಾಕಾಶ ನೌಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.