ಬೆಂಗಳೂರು:ಭಾರತದಲ್ಲಿ ತಂತ್ರಜ್ಞಾನ ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಅದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಇಸ್ರೋ ಸಹ ಮುಂದಾಗಿದೆ. ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಉತ್ತೇಜನ ನೀಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ಮತ್ತು ಮೈಕ್ರೋಸಾಫ್ಟ್ ಗುರುವಾರ ಸಹಮತಕ್ಕೆ ಬಂದಿವೆ.
ಈ ಸಹಯೋಗವು ದೇಶದಾದ್ಯಂತ ಬಾಹ್ಯಾಕಾಶ ಟೆಕ್ ಸ್ಟಾರ್ಟ್ - ಅಪ್‌ಗಳನ್ನು, ತಂತ್ರಜ್ಞಾನ ಪರಿಕರಗಳು ಮತ್ತು ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಶಕ್ತಗೊಳಿಸಲು ನೆರವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ತಂತ್ರಜ್ಞಾನದ ಬೆಂಬಲ ಮತ್ತು ಮಾರ್ಗದರ್ಶನವನ್ನು ಪಡೆಯಲು ಮತ್ತು ಬಳಸಲು ಇದು ಸಹಾಯ ಮಾಡುತ್ತದೆ. ಮೈಕ್ರೋಸಾಫ್ಟ್ ಚೇರ್ಮನ್ ಮತ್ತು ಸಿಇಒ ಸತ್ಯ ನಾಡೆಲ್ಲಾ ಅವರು ಮೈಕ್ರೋಸಾಫ್ಟ್ ಫ್ಯೂಚರ್ ರೆಡಿ ಟೆಕ್ನಾಲಜಿ ಶೃಂಗಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಜತೆ ಇಸ್ರೋ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿದೆ.
ಇಸ್ರೋ ಜೊತೆಗಿನ ಒಪ್ಪಂದ ಹಲವು ಲಾಭ:ಭಾರತದ ಅತ್ಯಂತ ಭರವಸೆಯ ಬಾಹ್ಯಾಕಾಶ ತಂತ್ರಜ್ಞಾನದ ಸಂಶೋಧಕರು ಮತ್ತು ಉದ್ಯಮಿಗಳ ಮಾರುಕಟ್ಟೆ ಸಾಮರ್ಥ್ಯವನ್ನು ಬಳಸಿಕೊಳ್ಳುವ ದೃಷ್ಟಿಕೋನದಿಂದ ಇಸ್ರೋದ ಜೊತೆ ಸಹಯೋಗಕ್ಕೆ ಬರಲಾಗಿದೆ ಎಂದು ಮೈಕ್ರೋಸಾಫ್ಟ್ ತಾನು ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂಬಂಧವಾಗಿ ಇಸ್ರೋ ಗುರುತಿಸಿರುವ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳನ್ನು 'ಮೈಕ್ರೋಸಾಫ್ಟ್ ಫಾರ್ ಸ್ಟಾರ್ಟ್-ಅಪ್ಸ್ ಫೌಂಡರ್ಸ್ ಹಬ್ ಪ್ಲಾಟ್‌ಫಾರ್ಮ್'ಗೆ ಸೇರಿಸಲಾಗುತ್ತದೆ. ಸ್ಟಾರ್ಟ್ - ಅಪ್‌ಗಳನ್ನು ಇಸ್ರೋ ಪ್ರಯಾಣದ ಪ್ರತಿ ಹಂತದಲ್ಲೂ ಬೆಂಬಲಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ತನ್ನ ತಂತ್ರಜ್ಞಾನದ ಹಬ್ ಮೂಲಕ, ಭಾರತದಲ್ಲಿನ ಬಾಹ್ಯಾಕಾಶ - ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳ ಸಂಸ್ಥಾಪಕರು ತಮ್ಮ ವ್ಯವಹಾರ ನಡೆಸಲು ಮತ್ತು ಅವರಿಗೆ ಬೇಕಾದ ಟೆಕ್ ಉಪಕರಣಗಳು ಮತ್ತು ಸಂಪನ್ಮೂಲಗಳಿಗೆ ಉಚಿತ ಪ್ರವೇಶ ಇದೆ ಎಂದು ಮೈಕ್ರೋಸಾಫ್ಟ್ ಪ್ರಕಟಣೆ ತಿಳಿಸಿದೆ. GitHub ಎಂಟರ್‌ಪ್ರೈಸ್, ವಿಷುಯಲ್ ಸ್ಟುಡಿಯೋ ಎಂಟರ್‌ಪ್ರೈಸ್ ಮತ್ತು ಮೈಕ್ರೋಸಾಫ್ಟ್ 365 ಮತ್ತು ಪವರ್ ಬಿಐ ಮತ್ತು ಡೈನಾಮಿಕ್ಸ್ 365 ನೊಂದಿಗೆ ಸ್ಮಾರ್ಟ್ ಅನಾಲಿಟಿಕ್ಸ್‌ಗೆ ಪ್ರವೇಶ ಒಳಗೊಂಡಂತೆ ಅತ್ಯುತ್ತಮ - ದರ್ಜೆಯ ಡೆವಲಪರ್ ಮತ್ತು ಉತ್ಪಾದಕತೆಯ ಪರಿಕರಗಳನ್ನು ಒದಗಿಸಲಿದೆ ಎಂದು ಮೈಕ್ರೋಸಾಫ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೋ ಸಂತಸ:ಮೈಕ್ರೋಸಾಫ್ಟ್ ಜೊತೆಗಿನ ಬಾಹ್ಯಾಕಾಶ ಸಂಸ್ಥೆಯ ಸಹಯೋಗವು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆಯಂತಹ ಅತ್ಯಾಧುನಿಕ ವಿಧಾನಗಳನ್ನು ಬಳಸಿಕೊಂಡು ವಿವಿಧ ಅಪ್ಲಿಕೇಶನ್‌ಗಳಿಗಾಗಿ ಅಪಾರ ಪ್ರಮಾಣದ ಉಪಗ್ರಹ ಡೇಟಾವನ್ನು ವಿಶ್ಲೇಷಿಸಲು ನೆರವಾಗುತ್ತದೆ. ಮತ್ತು ಇವುಗಳನ್ನು ಸಕ್ರಿಯೆಗೊಳಿಸಲು ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.